×
Ad

ಯಾಕೂಬ್ ಮೆನನ್ ಗೋರಿ ಈಗ ಆರಾಧನಾ ತಾಣವಾಗಿದೆ ಎಂಬ ಆರೋಪ:ತನಿಖೆಗೆ ಆದೇಶ

Update: 2022-09-08 22:20 IST
photo :DAWN

ಮುಂಬೈ,ಸೆ.8: ಮಹಾರಾಷ್ಟ್ರ ಸರಕಾರವು ಮಹಾನಗರದಲ್ಲಿರುವ 1993ರ ಮುಂಬೈ ಸರಣಿ ಸ್ಫೋಟಗಳ ತಪ್ಪಿತಸ್ಥ ಯಾಕೂಬ್ ಮೆನನ್ ಗೋರಿಯನ್ನು ಸುಂದರಗೊಳಿಸಿ ಆರಾಧನಾ ತಾಣ ‘ಮಝಾರ್’ನ್ನಾಗಿ ಪರಿವರ್ತಿಸಲಾಗಿದೆ ಎಂಬ ಆರೋಪಗಳ ಕುರಿತು ತನಿಖೆಗೆ ಆದೇಶಿಸಿದೆ.

ಈ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸಿ ವರದಿಯನ್ನು ಸಲ್ಲಿಸುವಂತೆ ರಾಜ್ಯದ ಗೃಹ ಇಲಾಖೆಯು ಮುಂಬೈ ಪೊಲೀಸರಿಗೆ ಸೂಚಿಸಿದೆ.

 ಘಾಟಕೋಪರ್(ಪೂರ್ವ)ನ ಬಿಜೆಪಿ ಶಾಸಕ ರಾಮ ಕದಂ ಅವರು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಸ್ಥಳದ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದ ಅವರು ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ ವಿರುದ್ಧ ದಾಳಿ ನಡೆಸಿದ್ದರು. ಠಾಕ್ರೆಯವರ ಆಡಳಿತದಲ್ಲಿ ಗೋರಿಯನ್ನು‘ಮಝಾರ್’ ಆಗಿ ಪರಿವರ್ತಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ‘ಇದು ಮುಂಬೈ ಮೇಲೆ ಅವರ ಪ್ರೀತಿಯೇ? ಇದು ಅವರ ದೇಶಭಕ್ತಿಯೇ?’ ಎಂದು ಕದಂ ಟ್ವೀಟಿಸಿದ್ದರು.

ಸ್ಥಳದ ಹಿಂದಿನ ಮತ್ತು ಈಗಿನ ಚಿತ್ರಗಳು ಕಾಂಕ್ರೀಟ್ ಗೋಡೆಯ ಬದಲು ಮಾರ್ಬಲ್ ಗೋಡೆಯು ನಿರ್ಮಾಣಗೊಂಡಿರುವುದನ್ನು ತೋರಿಸಿವೆ.

ಠಾಕ್ರೆ,ಎನ್‌ಸಿಪಿ ವರಿಷ್ಠ ಶರದ ಪವಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂಬಯಿಗರ ಕ್ಷಮೆಯನ್ನು ಯಾಚಿಸಬೇಕೆಂದು ಕದಂ ಆಗ್ರಹಿಸಿದ್ದಾರೆ. ಶಿವಸೇನೆ,ಎನ್‌ಸಿಪಿ ಮತ್ತು ಕಾಂಗ್ರೆಸ್ ಹಿಂದಿನ ಮಹಾವಿಕಾಸ್ ಅಘಾಡಿ ಸರಕಾರದಲ್ಲಿ ಪಾಲುದಾರರಾಗಿದ್ದವು.

257 ಜನರು ಕೊಲ್ಲಲ್ಪಟ್ಟಿದ್ದ 1993ರ ಸರಣಿ ಬಾಂಬ್ ಸ್ಫೋಟಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಕ್ಕಾಗಿ ನ್ಯಾಯಾಲಯದಿಂದ ದೋಷಿ ಎಂದು ಘೋಷಿಸಲ್ಪಟ್ಟಿದ್ದ ಯಾಕೂಬ್ ಮೆಮನ್‌ನನ್ನು 2015ರಲ್ಲಿ ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಆತನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು,ಮುಂಬೈನ ಮರೀನ್ ಲೈನ್ಸ್ ಪ್ರದೇಶದಲ್ಲಿಯ ಖಬರಸ್ತಾನ್‌ದಲ್ಲಿ ದಫನ ಮಾಡಲಾಗಿತ್ತು. ಮೆಮನ್ ಗೋರಿಯ ಬಳಿ ಯಾವುದೇ ಆರಾಧನಾ ತಾಣ ತಲೆಯೆತ್ತಿರುವುದನ್ನು ಖಬರಸ್ತಾನ್ ಸಮಿತಿಯ ಅಧ್ಯಕ್ಷ ಶೋಯೆಬ್ ಖತೀಬ್ ನಿರಾಕರಿಸಿದ್ದಾರೆ.

‘ಯಾಕೂಬ್ ಮೆಮನ್ ಮಾತ್ರವಲ್ಲ,ಆತನ ಕುಟುಂಬದ ಹಲವರ ಗೋರಿಗಳೂ ಇಲ್ಲಿವೆ. ಭೂಮಿ ಕುಸಿಯುತ್ತಿತ್ತು,ಹೀಗಾಗಿ ನಾವು ಆವರಣ ಗೋಡೆಯನ್ನು ನಿರ್ಮಿಸಿದ್ದೇವೆ ’ ಎಂದು ವಿವಾದಗಳ ನಡುವೆಯೇ ಖತೀಬ್ ಮಾಧ್ಯಮಗಳಿಗೆ ತಿಳಿಸಿದರು.

ಸ್ಥಳದಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿತ್ತು,ಆದರೆ ವಿವಾದದ ಬಳಿಕ ಅವುಗಳನ್ನು ತೆಗೆಯಲಾಗಿದೆ ಎಂದು ಒಪ್ಪಿಕೊಂಡ ಖತೀಬ್, ಯಾಕೂಬ್ ಮೆಮನ್ ದೇಶದ್ರೋಹಿಯಾಗಿದ್ದು,ಆತನ ಬಗ್ಗೆ ಯಾವುದೇ ಸಹಾನುಭೂತಿಯಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News