ಭಯದ ಭಾವನೆಯಿಂದಾಗಿ ಕೆಲವೇ ಕಾಶ್ಮೀರಿ ಪಂಡಿತರು ವಾಪಸಾಗುತ್ತಿದ್ದಾರೆ:ಕರಣ್ ಸಿಂಗ್

Update: 2022-09-08 16:56 GMT
photo :NDTV

ಹೊಸದಿಲ್ಲಿ,ಸೆ.8: ಕಾಶ್ಮೀರಿ ಪಂಡಿತರಲ್ಲಿ ನಿರಂತರ ಭಯ ಮತ್ತು ಆತಂಕದ ಭಾವನೆಯಿಂದಾಗಿ ಅವರಲ್ಲಿ ಕೆಲವೇ ಜನರು ಕಣಿವೆಯಲ್ಲಿನ ತಮ್ಮ ತವರೂರಿಗೆ ಮರಳಲು ಮನಸ್ಸು ಮಾಡುತ್ತಿದ್ದಾರೆ ಎಂದು ಹಿರಿಯ ರಾಜಕಾರಣಿ ಕರಣ ಸಿಂಗ್ ಅವರು ಹೇಳಿದರು.

ಖ್ಯಾತ ಹೃದಯತಜ್ಞ ಡಾ.ಉಪೇಂದ್ರ ಕೌಲ್ ಅವರ ನೆನಪುಗಳ ‘ಹೃದಯವು ಮಾತನಾಡಿದಾಗ ’ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಂಗ್,ಕಣಿವೆಯಿಂದ ತೆರಳಲು ಸಾಧ್ಯವಾದ ಹೆಚ್ಚಿನ ಕಾಶ್ಮೀರಿ ಪಂಡಿತರು,ಅದು ವಿದೇಶವಾಗಲಿ ಅಥವಾ ದೇಶದ ವಿವಿಧ ಭಾಗಗಳಾಗಿರಲಿ,ಒಳ್ಳೆಯ ನೆಲೆಯನ್ನು ಕಂಡುಕೊಂಡಿದ್ದಾರೆ. ಆದಾಗ್ಯೂ ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರವು ಯಾವಾಗಲೂ ‘ಅಪೂರ್ಣ’ವಾಗಿರುತ್ತದೆ ಎಂದರು.

ಕಾಶ್ಮೀರವು ಸುಂದರವಾಗಿದೆ ಮತ್ತು ಆಕರ್ಷಕವಾಗಿದೆ,1947ರಿಂದ ಕಣಿವೆಯಲ್ಲಿ ನಡೆದ ದುರಂತವು ಹೃದಯವಿದ್ರಾವಕವಾಗಿದೆ ಎಂದು ಸಿಂಗ್ ಹೇಳಿದರು. ಸಿಂಗ್ ತಂದೆ ಮಹಾರಾಜ ಹರಿಸಿಂಗ್ ಅವರು ಕಾಶ್ಮೀರದ ಕೊನೆಯ ಡೋಗ್ರಾ ಆಡಳಿತಗಾರರಾಗಿದ್ದರು.

ಕಣಿವೆಗೆ ಮರಳಿ ತಮ್ಮ ನೆಲೆಗಳನ್ನು ನಿರ್ಮಿಸಿಕೊಂಡಿರುವ ಡಾ.ಕೌಲ್ ಮತ್ತು ಅವರಂತಹ ಇತರ ಕಾಶ್ಮೀರಿ ಪಂಡಿತರನ್ನು ಪ್ರಶಂಸಿಸಿದ ಸಿಂಗ್, ಆದರೆ ಇಂತಹ ಉದಾಹರಣೆಗಳು ಅತ್ಯಂತ ಅಪರೂಪವಾಗಿವೆ ಎಂದು ಹೇಳಿದರು.

  ಕಾಶ್ಮೀರ ಪಂಡಿತರಲ್ಲಿ ಯಾವಾಗಲೂ ಭಯ ಮತ್ತು ಆತಂಕದ ಭಾವನೆ ಮನೆ ಮಾಡಿದೆ ಮತ್ತು ಇದರಿಂದಾಗಿಯೇ ಕೆಲವೇ ಕಾಶ್ಮೀರಿ ಪಂಡಿತರು ಕಣಿವೆಗೆ ಮರಳುತ್ತಿದ್ದಾರೆ. ಅವರು ಅನುಭವಿಸಿರುವ ಆಘಾತದಿಂದಾಗಿ ಹಾಗೆ ಮಾಡಲು ಸುದೀರ್ಘ ಸಮಯ ಬೇಕಾಗುತ್ತದೆ,ಅವರು ಆ ಆಘಾತವನ್ನು ಮತ್ತೆ ಎದುರಿಸಲು ಸಿದ್ಧರಿಲ್ಲ ಎಂದು ತಾನು ಭಾವಿಸಿದ್ದೇನೆ ಎಂದ ಸಿಂಗ್,ಮರಳಿ ಬಂದಾಗಿನಿಂದ ಜಮ್ಮುವಿನಲ್ಲಿ ಶಾಂತಿಯುತ ಜೀವನ ನಡೆಸುತ್ತಿರುವ ವಲಸಿಗರ ಅಗತ್ಯಗಳು ಮತ್ತು ಮರಳಲು ಬಯಸುವ ಕಾಶ್ಮೀರ ಪಂಡಿತರ ಬಗ್ಗೆ ಈಗ ವಿಶೇಷ ಕಾಳಜಿಯನ್ನು ವಹಿಸಬೇಕಿದೆ ಎಂದರು.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನಿರ್ಗಮನವು ಜಮ್ಮು-ಕಾಶ್ಮೀರದಲ್ಲಿ ನಡೆದ ಅತ್ಯಂತ ಭಯಾನಕ ಮತ್ತು ದುರಂತ ಘಟನೆಗಳಲ್ಲೊಂದಾಗಿದೆ ಎಂದು ಬಣ್ಣಿಸಿದ ಸಿಂಗ್ ಸಮುದಾಯದ ಕುರಿತು ಪ್ರಶಂಸೆಯ ಸುರಿಮಳೆಗರೆದರು. ಕಾಶ್ಮೀರಿ ಪಂಡಿತರು ನೀಡಿದ್ದ ಶಿಕ್ಷಣದಿಂದಲೇ ತಾನು ತನ್ನ ಜೀವನದಲ್ಲಿ ಹೆಚ್ಚಿನದನ್ನು ಕಲಿತಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News