ನೀಟ್ ಪರೀಕ್ಷೆ: ಮಣಿಪಾಲದ ವೃಜೇಶ್‌ಗೆ 13ನೇ ರ‍್ಯಾಂಕ್
ಉಡುಪಿ, ಸೆ.8: ಬುಧವಾರ ರಾತ್ರಿ ಪ್ರಕಟವಾದ ವೈದ್ಯಕೀಯ ಕೋರ್ಸ್‌ಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಮಣಿಪಾಲದ ವೃಜೇಶ್ ವೀಣಾಧರ್ ಶೆಟ್ಟಿ 13ನೇ ರ‍್ಯಾಂಕ್ ಪಡೆದಿದ್ದಾರೆ. ಅವರ ಅವಳಿ ಸಹೋದರ ವೃಶಾನ್ 547ನೇ ಸ್ಥಾನ ಪಡೆಯುಲ್ಲಿ ಯಶಸ್ವಿಯಾಗಿದ್ದಾರೆ.
ವೃಜೇಶ್ ಅವರು ಒಟ್ಟು 720 ಅಂಕಗಳಲ್ಲಿ 710 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಅವರು ದೇಶದಲ್ಲಿ 13ನೇ ಹಾಗೂ ಕರ್ನಾಟಕ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.
ವೃಶಾನ್ ಅವರು 685 ಅಂಕಗಳನ್ನು ಪಡೆಯುವ ಮೂಲಕ ದೇಶದಲ್ಲಿ 547ನೇ ಕರ್ನಾಟಕ ರಾಜ್ಯ ಮಟ್ಟದಲ್ಲಿ 39ನೇ ಸ್ಥಾನ ಪಡೆದಿದ್ದಾರೆ. ಜುಲೈ ತಿಂಗಳಲ್ಲಿ ಪ್ರಕಟವಾದ ಸಿಇಟಿ ಪರೀಕ್ಷೆಯಲ್ಲಿ ಇವರಿಬ್ಬರು ಒಟ್ಟು ಏಳು ರ‍್ಯಾಂಕ್ ಗಳನ್ನು ಹಂಚಿಕೊಂಡಿದ್ದು ಗಮನ ಸೆಳೆದಿದ್ದರು.
ವೃಜೇಶ್ ಅವರು ರಾಷ್ಟ್ರೀಯ ಮಟ್ಟದಲ್ಲಿ 13ನೇ ರ‍್ಯಾಂಕ್ ಪಡೆದಿರುವುದರಿಂದ ನಿರೀಕ್ಷೆಯಂತೆ ಹೊಸದಿಲ್ಲಿಯ ಏಮ್ಸ್‌ನಲ್ಲಿ ಸೀಟು ಪಡೆಯುವುದು ಖಚಿತವಾಗಿದೆ. ಆದರೆ ವೃಶಾನ್ ಅವರು ಬೆಂಗಳೂರು ಮೆಡಿಕಲ್ ಕಾಲೇಜು ಅಥವಾ ಮಣಿಪಾಲದ ಕೆಎಂಸಿಯಲ್ಲಿ ಎಂಬಿಬಿಎಸ್‌ಗೆ ಸೇರುವ ಬಗ್ಗೆ ಆಲೋಚಿಸುತ್ತಿರುವುದಾಗಿ ಮಣಿಪಾಲದಲ್ಲಿ ಫೈನಾನ್ಷಿಯಲ್ ಕನ್ಸಲ್ಟೆಂಟ್ ಆಗಿರುವ ತಂದೆ ವೀಣಾಧರ ಶೆಟ್ಟಿ ತಿಳಿಸಿದ್ದಾರೆ.
ಈ ನಡುವೆ ಉಡುಪಿಯ ಎರಡು ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳು ವೃಜೇಶ್ ಅವರು ತಮ್ಮ ವಿದ್ಯಾರ್ಥಿ ಎಂದು ಜಾಹೀರಾತು ನೀಡಿ ಕೋಳಿ ಜಗಳಕ್ಕಿಳಿದಿವೆ. ಈ ಬಗ್ಗೆ ಅವರ ತಂದೆ ಬಳಿ ಪ್ರಶ್ನಿಸಿದಾಗ, ತಮ್ಮ ಇಬ್ಬರು ಮಕ್ಕಳು ಉಡುಪಿಯ ಬೇಸ್ ಕೋಚಿಂಗ್ ಸೆಂಟರ್‌ನಲ್ಲಿ ಕಾಸ್‌ರೂಮ್ ವಿದ್ಯಾರ್ಥಿಗಳಾಗಿದ್ದು, ಆಕಾಶ್ ಕೋಚಿಂಗ್ ಸೆಂಟರ್‌ನ ರಾಷ್ಟ್ರೀಯ ಮಟ್ಟದ ದೂರ ಶಿಕ್ಷಣ ಕಾರ್ಯಕ್ರಮ (ಡಿಎಲ್‌ಪಿ) ಅಡಿ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡು ಸ್ಕಾಲರ್‌ಶಿಪ್ ಪಡೆಯುವ ಮೂಲಕ ಅವರು ನಿಗದಿತವಾಗಿ ನಡೆಸುವ ಪರೀಕ್ಷೆಯಲ್ಲೂ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.