ಹಿಜಾಬ್‌ ಅನ್ನು ಸಿಖ್ಖರ ಟರ್ಬನ್‌, ಕಿರ್ಪನ್‌ ನೊಂದಿಗೆ ಹೋಲಿಸಲಾಗುವುದಿಲ್ಲ: ಸುಪ್ರೀಂ ಕೋರ್ಟ್‌

Update: 2022-09-08 18:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು, ಟರ್ಬನ್ ಮತ್ತು ಕಿರ್ಪನ್‌ ಧರಿಸಲು ಸಿಖ್ಖರಿಗೆ ಅನುಮತಿ ಇರುವುದರಿಂದ ಸಿಖ್ ಕಿರ್ಪನ್‌ ಮತ್ತು ಪೇಟವನ್ನು ಹಿಜಾಬ್‌ಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿದೆ ಎಂದು ANI ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಎತ್ತಿಹಿಡಿಯುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ವಿವಿಧ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯಗಳನ್ನು ನೀಡಿದೆ. ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲ ನಿಝಾಮುದ್ದೀನ್ ಪಾಷಾ ಅವರು ಕಿರ್ಪಾನ್ ಮತ್ತು ಪೇಟ ಮತ್ತು ಹಿಜಾಬ್ ನಡುವೆ ಇರುವ ಸಮಾನಾಂತರ ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತರಲು ಪ್ರಯತ್ನಿಸಿದರು.

 ಹಿಜಾಬ್ ಮುಸ್ಲಿಂ ಹೆಣ್ಣುಮಕ್ಕಳ ಧಾರ್ಮಿಕ ಆಚರಣೆಯ ಭಾಗವಾಗಿದೆ ಎಂದ ಪಾಷಾ, ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬರುವುದನ್ನು ತಡೆಯಬಹುದೇ ಎಂದು ಕೇಳಿದರು. ಸಿಖ್ ವಿದ್ಯಾರ್ಥಿಗಳೂ ಟರ್ಬನ್ ಧರಿಸುತ್ತಾರೆ ಎಂದು ಅವರು ವಾದಿಸಿದರು. ಸಾಂಸ್ಕೃತಿಕ ಆಚರಣೆಗಳನ್ನು ರಕ್ಷಿಸಬೇಕು ಎಂದು ಪಾಷಾ ಒತ್ತಾಯಿಸಿದರು. ಇದಕ್ಕೆ ನ್ಯಾಯಮೂರ್ತಿ ಗುಪ್ತಾ ಅವರು ಕಿರ್ಪಾನ್ ಧರಿಸುವುದನ್ನು ಸಂವಿಧಾನವು ಗುರುತಿಸಿರುವುದರಿಂದ ಹಿಜಾಬ್‌ ಅನ್ನು ಸಿಖ್ಖರೊಂದಿಗೆ ಹೋಲಿಕೆ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು. ಆದ್ದರಿಂದ ಆಚರಣೆಗಳನ್ನು ಹೋಲಿಸಬೇಡಿ. ಪೇಟಕ್ಕೆ ಶಾಸನಬದ್ಧ ಅವಶ್ಯಕತೆಗಳಿವೆ ಮತ್ತು ಈ ಎಲ್ಲಾ ಆಚರಣೆಗಳು ದೇಶದ ಸಂಸ್ಕೃತಿಯಲ್ಲಿ ಉತ್ತಮವಾಗಿ ಸ್ಥಾಪಿತವಾಗಿವೆ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದರು.

ಪಾಷಾ ಅವರು ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ವಿರೋಧಿಸಿ, ಹಿಜಾಬ್ ಮುಸ್ಲಿಂ ಮಹಿಳೆಯರನ್ನು ರಕ್ಷಿಸುತ್ತದೆ ಎಂದು ಹೇಳಿದರು. ಹಿಜಾಬ್ ಒಂದು ಸಾಂಸ್ಕೃತಿಕ ಆಚರಣೆ ಎಂದು ಕರ್ನಾಟಕ ಹೈಕೋರ್ಟ್‌ನ ತೀರ್ಮಾನವು ಊಹೆಯ ಮೇಲೆ ಆಧಾರಿತವಾಗಿದೆ ಎಂದು ಪಾಷಾ ಹೇಳಿದರು. ತಮ್ಮ ವಾದಗಳನ್ನು ಬೆಂಬಲಿಸಲು ವಿವಿಧ ಧಾರ್ಮಿಕ ಗ್ರಂಥಗಳನ್ನು ಉಲ್ಲೇಖಿಸಿದ ಅವರು,  ಹಿಜಾಬ್ ಅವಶ್ಯಕತೆಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿರುವುದು ತಪ್ಪು ವ್ಯಾಖ್ಯಾನವಾಗಿದೆ ಎಂದು ವಾದಿಸಿದರು.

ಇನ್ನೊಬ್ಬ ಅರ್ಜಿದಾರರ ಪರ ಹಾಜರಾದ ವಕೀಲ ದೇವದತ್ ಕಾಮತ್, 'ಕರ್ನಾಟಕ, ಕೇರಳ ಮತ್ತು ಮದ್ರಾಸ್ ಹೈಕೋರ್ಟ್ ತೀರ್ಪುಗಳು ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿವೆʼ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮದ್ರಾಸ್ ಮತ್ತು ಕೇರಳದ ನ್ಯಾಯಾಲಯಗಳು ಹಿಜಾಬ್ ಅನ್ನು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಪರಿಗಣಿಸಿವೆ, ಆದರೆ ಕರ್ನಾಟಕ ಹೈಕೋರ್ಟ್ ವಿಭಿನ್ನವಾಗಿ‌ ಪರಿಗಣಿಸಿದೆ ಎಂದು ಕಾಮತ್ ಹೇಳಿದರು. ಕರ್ನಾಟಕ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರದ ಆದೇಶವನ್ನು ಯೋಚಿಸದೆ ನೀಡಲಾಗಿದೆ ಎಂದು ಕಾಮತ್‌ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News