ಅ.11ರಂದು ಪೂಜಾಸ್ಥಳಗಳ ಕಾಯ್ದೆ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ

Update: 2022-09-09 16:00 GMT

ಹೊಸದಿಲ್ಲಿ,ಸೆ.9: 1991ರ ಪೂಜಾಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠವು ಅ.11ರಂದು ನಡೆಸಲಿದೆ.

ಎರಡು ವಾರಗಳಲ್ಲಿ ಅರ್ಜಿಗಳಿಗೆ ಉತ್ತರವನ್ನು ಸಲ್ಲಿಸುವಂತೆ ಶುಕ್ರವಾರ ಕೇಂದ್ರಕ್ಕೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠವು,ಅರ್ಜಿಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಹೊರಡಿಸಲಾಗಿದ್ದ ನೋಟಿಸಿಗೆ ಕೇಂದ್ರ ಸರಕಾರವು ಈವರೆಗೆ ಯಾವುದೇ ಉತ್ತರವನ್ನು ಸಲ್ಲಿಸಿಲ್ಲ ಎನ್ನುವುದನ್ನು ಗಮನಿಸಿತು.

ಪೂಜಾಸ್ಥಳಗಳ ಕಾಯ್ದೆಯನ್ನು ಪ್ರಶ್ನಿಸಿರುವ ಮುಖ್ಯ ಅರ್ಜಿಗಳಲ್ಲಿ ಮಧ್ಯಪ್ರವೇಶಕ್ಕೆ ಮತ್ತು ಐದು ಪುಟಗಳಿಗೆ ಮೀರದಂತೆ ಹೇಳಿಕೆಗಳನ್ನು ಸಲ್ಲಿಸಲೂ ಪೀಠವು ಅರ್ಜಿದಾರರಿಗೆ ಅವಕಾಶವನ್ನು ನೀಡಿತು.

ಕೆಲವು ಅರ್ಜಿಗಳು ಮತ್ತು ವಿಷಯದ ಕುರಿತು ಸಲ್ಲಿಸಲಾಗಿರುವ ಮಧ್ಯಪ್ರವೇಶ ಅರ್ಜಿಗಳ ಕುರಿತೂ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನೋಟಿಸನ್ನು ಹೊರಡಿಸಿತು.

ಪೂಜಾಸ್ಥಳಗಳ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿಯು, ಆಕ್ರಮಣಕಾರರಿಂದ ಧ್ವಂಸಗೊಂಡ ತಮ್ಮ ಪೂಜಾ ಮತ್ತು ಯಾತ್ರಾಸ್ಥಳಗಳನ್ನು ಮರುಸ್ಥಾಪಿಸುವ ಹಿಂದುಗಳು,ಜೈನರು,ಬೌದ್ಧರು ಮತ್ತು ಸಿಕ್ಖರ ಹಕ್ಕುಗಳನ್ನು ಕಾಯ್ದೆಯು ಕಸಿದುಕೊಳ್ಳುತ್ತದೆ ಎಂದು ಪ್ರತಿಪಾದಿಸಿದೆ.

ಕಾಶಿ ಅರಸು ಮನೆತನದ ಮಹಾರಾಜಕುಮಾರಿ ಕೃಷ್ಣಪ್ರಿಯಾ,ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ,ಮಾಜಿ ಸಂಸದ ಚಿಂತಾಮಣಿ ಮಾಳವೀಯ,ನಿವೃತ್ತ ಸೇನಾಧಿಕಾರಿ ಅನಿಲ ಕಬೋತ್ರಾ,ವಕೀಲ ಚಂದ್ರಶೇಖರ,ವಾರಣಾಸಿ ನಿವಾಸಿ ರುದ್ರ ವಿಕ್ರಮ ಸಿಂಗ್,ಧಾರ್ಮಿಕ ನಾಯಕ ಸ್ವಾಮಿ ಜಿತೇಂದ್ರಾನಂದ ಸರಸ್ವತಿ,ಮಥುರಾ ನಿವಾಸಿ ಧಾರ್ಮಿಕ ಗುರು ದೇವಕಿನಂದನ ಠಾಕೂರ್ ಮತ್ತಿತರರು ಈ ಅರ್ಜಿಗಳಲ್ಲಿ ಸಲ್ಲಿಸಿದ್ದಾರೆ.

ಕಾಯ್ದೆಯನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯರ ಅರ್ಜಿ ಸೇರಿದಂತೆ ಎರಡು ಅರ್ಜಿಗಳ ಕುರಿತು ಸವೋಚ್ಚ ನ್ಯಾಯಾಲಯವು ಈ ಹಿಂದೆ ಕೇಂದ್ರಕ್ಕೆ ನೋಟಿಸ್‌ಗಳನ್ನು ಹೊರಡಿಸಿತ್ತು. ಹಿಂದು ಅರ್ಜಿದಾರರ ಅರ್ಜಿಗಳನ್ನು ಪ್ರಶ್ನಿಸಿ ಜಮೀಯತ್ ಉಲಮಾ-ಇ-ಹಿಂದ್ ಕೂಡ ಅರ್ಜಿಯನ್ನು ಸಲ್ಲಿಸಿದ್ದು,ಕಾಯ್ದೆಯ ವಿರುದ್ಧದ ಅರ್ಜಿಗಳನ್ನು ಅಂಗೀಕರಿಸಿದರೆ ಅದು ಭಾರತದಾದ್ಯಂತದ ಅಸಂಖ್ಯಾತ ಮಸೀದಿಗಳ ವಿರುದ್ಧ ದಾವೆಗಳ ಮಹಾಪೂರಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News