ಗೋವಾ ಕೆಫೆಯನ್ನು ಲೀಸ್‌ಗೆ ಪಡೆದಿರುವ ಸ್ಮೃತಿ ಇರಾನಿ ಕುಟುಂಬದೊಂದಿಗೆ ನಂಟು ಹೊಂದಿರುವ ಸಂಸ್ಥೆ: ಆರ್ಟಿಐ ದಾಖಲೆಗಳು

Update: 2022-09-10 08:37 GMT

ಹೊಸದಿಲ್ಲಿ: ಜೂನ್‌ನಿಂದ ರಾಜಕೀಯ ವಿವಾದದ ಕೇಂದ್ರಬಿಂದುವಾಗಿರುವ ಗೋವಾದ ʼಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ʼ(Silly souls cafe and bar) ಅನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ಅವರ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಆರ್ಟಿಐ ಅರ್ಜಿಯನ್ನು ಉಲ್ಲೇಖಿಸಿ Theindianexpress.com ಶುಕ್ರವಾರ ವರದಿ ಮಾಡಿದೆ.

ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಐರಿಸ್ ರಾಡ್ರಿಗಸ್ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಬಂದ ಪ್ರತಿಕ್ರಿಯೆಯು, ರೆಸ್ಟೋರೆಂಟ್ ಡೀನ್ ಡಿ'ಗಾಮಾ ಎಂಬ ವ್ಯಕ್ತಿ, ಅವರ ತಂದೆ ಆಂಥೋನಿ ಡಿ'ಗಾಮಾ ಮತ್ತು ಎಯ್ಟಾಲ್ ಫುಡ್ ಅಂಡ್ ಬೆವರೇಜಸ್ ಲಿಮಿಟೆಡ್ ಹೊಣೆಗಾರಿಕೆಯ ಕಂಪನಿಯ ನಡುವಿನ ಗುತ್ತಿಗೆ ಒಪ್ಪಂದದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತೋರಿಸಿದೆ.

ಇರಾನಿ ಕುಟುಂಬದ ಒಡೆತನದ ಕಂಪನಿಗಳು ಎಯ್ಟಾಲ್ ಫುಡ್ ಅಂಡ್ ಬೆವರೇಜಸ್‌ನಲ್ಲಿ ಹೂಡಿಕೆ ಮಾಡಿವೆ ಎಂದು Theindianexpress.com ಆಗಸ್ಟ್ 2 ರಂದು ವರದಿ ಮಾಡಿತ್ತು.

ಸಚಿವೆಯ ಪುತ್ರಿ ಜೊಯಿಶ್ ಇರಾನಿ, ಅವರ ಪುತ್ರ ಜೋರ್ ಇರಾನಿ, ಪತಿ ಜುಬಿನ್ ಇರಾನಿ ಮತ್ತು ಅವರ ಮಗಳು ಶನೆಲ್ ಇರಾನಿ ಅವರು 2020-2021ರಲ್ಲಿ ಎಯ್ಟಾಲ್‌ ನಲ್ಲಿ ಹೂಡಿಕೆ ಮಾಡಿದ ಉಗ್ರಯ ಮರ್ಕೆಂಟೈಲ್ ಪ್ರೈವೇಟ್ ಲಿಮಿಟೆಡ್ ಮತ್ತು ಉಗ್ರಯ ಅಗ್ರೋ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಎರಡು ಸಂಸ್ಥೆಗಳನ್ನು ಹೊಂದಿದ್ದಾರೆ.

ಆದಾಗ್ಯೂ, ಸ್ಮೃತಿ ಇರಾನಿ ಅವರು ಮೂರು ಕಂಪನಿಗಳಲ್ಲಿ ಯಾವುದೇ ಷೇರುಗಳನ್ನು ಹೊಂದಿಲ್ಲ.

ಆರ್‌ಟಿಐ ಅರ್ಜಿಯ ಮೂಲಕ ದೊರಕಿದ ದಾಖಲೆಗಳು ಡೀನ್ ಡಿ'ಗಾಮಾ ಮತ್ತು ಎಯ್ಟಾಲ್ ಫುಡ್ ಅಂಡ್ ಬೆವರೇಜಸ್ ನಡುವಿನ ಗುತ್ತಿಗೆ ಒಪ್ಪಂದವನ್ನು ಜನವರಿ 1, 2021 ರಂದು ಸಹಿ ಮಾಡಲಾಗಿದೆ ಎಂದು ತೋರಿಸುತ್ತದೆ. ಗುತ್ತಿಗೆಯು ಹತ್ತು ವರ್ಷಗಳವರೆಗೆ ತಿಂಗಳಿಗೆ ರೂ 50,000 ಬಾಡಿಗೆಯನ್ನು ಹೊಂದಿತ್ತು.

ದಿ ವೈರ್ ಪ್ರಕಾರ, ಜುಲೈ 23, 2021 ರಂದು, ಗೋವಾದ ಆಹಾರ ಮತ್ತು ಔಷಧ ಆಡಳಿತವು 10621001000195 ಸಂಖ್ಯೆಯನ್ನು ಹೊಂದಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿಯನ್ನು ಎಯ್ಟಾಲ್ ಆಹಾರ ಮತ್ತು ಪಾನೀಯ‌ ಸಂಸ್ಥೆಗೆ ನೀಡಿದೆ. ʼಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ʼ ಅನ್ನು ಅದೇ ಪರವಾನಗಿ ಸಂಖ್ಯೆಯ ಅಡಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಾಯಿಸಲಾಗಿದೆ.

ಜುಲೈ 24 ರಂದು, ಆಕೆಯ ಪುತ್ರಿ ಜೋಯಿಶ್ ಇರಾನಿ ನಡೆಸುತ್ತಿದ್ದ ʼಸಿಲ್ಲಿ ಸೋಲ್ಸ್ ಗೋವಾ ಕೆಫೆ ಮತ್ತು ಬಾರ್ʼ ತನ್ನ ಮದ್ಯದ ಪರವಾನಗಿಯನ್ನು ಅಕ್ರಮವಾಗಿ ನವೀಕರಿಸಿದೆ ಎಂಬ ವರದಿಗಳ ನಂತರ ಕಾಂಗ್ರೆಸ್ ಇರಾನಿ ಅವರ ರಾಜೀನಾಮೆಯನ್ನು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News