2024ರ ಲೋಕಸಭಾ ಚುನಾವಣೆ: ಮಾಜಿ ಸಿಎಂಗಳು, ಪ್ರಮುಖ ನಾಯಕರಿಗೆ ರಾಜ್ಯಗಳ ಉಸ್ತುವಾರಿ ನೀಡಿದ ಬಿಜೆಪಿ

Update: 2022-09-10 08:57 GMT
ಬಿಪ್ಲಬ್ ಕುಮಾರ್ ದೇಬ್, Photo:PTI

ಹೊಸದಿಲ್ಲಿ: ಮಾಜಿ ಮುಖ್ಯಮಂತ್ರಿಗಳಾದ ವಿಜಯ್ ರೂಪಾನಿ (ಗುಜರಾತ್) ಹಾಗೂ  ಬಿಪ್ಲಬ್ ಕುಮಾರ್ ದೇಬ್ (ತ್ರಿಪುರಾ) (Biplab Kumar Deb (Tripura)ಸೇರಿದಂತೆ ಹಲವಾರು ಹಿರಿಯ ನಾಯಕರಿಗೆ ಬಿಜೆಪಿ ಶುಕ್ರವಾರ ಸಂಘಟನಾ ಜವಾಬ್ದಾರಿಗಳನ್ನು ವಹಿಸಿದೆ. ಜೊತೆಗೆ ಮಾಜಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ  ಮಹೇಶ್ ಶರ್ಮಾ ಅವರನ್ನು ವಿವಿಧ ರಾಜ್ಯಗಳಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿಯನ್ನಾಗಿ ಮಾಡಿದೆ. 2024ರ ಸಾರ್ವತ್ರಿಕ ಚುನಾವಣೆಯ ಮೇಲೆ ಕಣ್ಣಿಟ್ಟು ಬಿಜೆಪಿ ಈ ಬದಲಾವಣೆ ಮಾಡಿದೆ ಎನ್ನಲಾಗಿದೆ.

ಪಕ್ಷದ ಹಿರಿಯ ನಾಯಕ ಹಾಗೂ  ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಓಂ ಮಾಥೂರ್ ಅವರು ಛತ್ತೀಸ್‌ಗಢದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಲಿದ್ದಾರೆ ಹಾಗೂ  ಮಾಜಿ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಹಾಗೂ  ರಾಜ್ಯಸಭಾ ಸಂಸದ ಲಕ್ಷ್ಮೀಕಾಂತ್ ಬಾಜಪೇಯ್ ಜಾರ್ಖಂಡ್ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಪಕ್ಷವು ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಬಿಹಾರಕ್ಕೆ ತನ್ನ ಹೊಸ ಉಸ್ತುವಾರಿ ಎಂದು ಹೆಸರಿಸಿದೆ. ಬಿಹಾರದ ಮಾಜಿ ಸಚಿವ ಮಂಗಲ್ ಪಾಂಡೆ ಅವರು ಪಶ್ಚಿಮ ಬಂಗಾಳವನ್ನು ನೋಡಿಕೊಳ್ಳುತ್ತಾರೆ.

ಹಿರಿಯ ನಾಯಕರ ಅನುಭವವನ್ನು ಬಳಸಿಕೊಳ್ಳಲು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹರೀಶ್ ದ್ವಿವೇದಿ ಅವರು ಬಿಹಾರಕ್ಕೆ ಹಾಗೂ  ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪಶ್ಚಿಮ ಬಂಗಾಳಕ್ಕೆ ಸಹ-ಪ್ರಭಾರಿಯಾಗಿ ಮುಂದುವರಿಯಲಿದ್ದಾರೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರಿಗೆ ಪ್ರಮುಖ ಸಾಂಸ್ಥಿಕ ಜವಾಬ್ದಾರಿಯನ್ನು ನೀಡಲಾಗಿದೆ. ಪಾತ್ರರನ್ನು ಎಂಟು ಈಶಾನ್ಯ ರಾಜ್ಯಗಳ ಸಂಯೋಜಕರಾಗಿ ನೇಮಸಲಾಗಿದೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್ ಸಿನ್ಹಾ ಅವರನ್ನು ಜಂಟಿ ಸಂಯೋಜಕರಾಗಿ ಹೆಸರಿಸಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಪಂಜಾಬ್ ಹಾಗೂ  ಚಂಡಿಗಢಕ್ಕೆ ರೂಪಾನಿ, ಹರ್ಯಾಣಕ್ಕೆ ದೇಬ್ ಹಾಗೂ  ಕೇರಳದಲ್ಲಿ ಪಕ್ಷದ ಕೆಲಸವನ್ನು ಜಾವಡೇಕರ್ ನೋಡಿಕೊಳ್ಳಲಿದ್ದಾರೆ.

ಏತನ್ಮಧ್ಯೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ರಾಜಸ್ಥಾನಕ್ಕೆ ಹಾಗೂ ಪಿ. ಮುರಳೀಧರ ರಾವ್ ಮಧ್ಯಪ್ರದೇಶದ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News