ಬಿಡುಗಡೆಯಾದ ಮರುದಿನವೇ ರಣಬೀರ್‌ ಕಪೂರ್‌, ಆಲಿಯಾ ಭಟ್‌ ನಟನೆಯ ʼಬ್ರಹ್ಮಾಸ್ತ್ರʼ ಆನ್‌ಲೈನ್‌ ನಲ್ಲಿ ಸೋರಿಕೆ?

Update: 2022-09-10 07:52 GMT

ಹೊಸದಿಲ್ಲಿ: ಅಯಾನ್‌ ಮುಖರ್ಜಿಯವರ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ಸಿನಿಮಾ ಕೊನೆಗೂ ಬಿಡುಗಡೆ ಕಂಡಿದೆ. ಬಿಡುಗಡೆಯಾದ ಮೊದಲ ದಿನದಂದು ಸಿನಿಮಾವು ಉತ್ತಮ ಪ್ರದರ್ಶನ ಕಂಡಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಈ ಸಿನಿಮಾ ಬಾಲಿವುಡ್‌ ನ ಚೇತರಿಕೆಗೆ ಕಾರಣವಾಗಬಹುದು ಎಂಬ ನಿರೀಕ್ಷೆಯನ್ನೂ ಹೊಂದಿತ್ತು. ಇದೀಗ ಬ್ರಹ್ಮಾಸ್ತ್ರ ಸಿನಿಮಾವನ್ನು ಅಕ್ರಮವಾಗಿ ಸ್ಟ್ರೀಮ್‌ ಮಾಡದಂತೆ ದಿಲ್ಲಿ ಹೈಕೋರ್ಟ್‌ ಹಲವು ವೆಬ್‌ಸೈಟ್‌ ಗಳಿಗೆ ಎಚ್ಚರಿಕೆ ನೀಡಿದ ಹೊರತಾಗಿಯೂ ಸಿನಿಮಾವನ್ನು ಆನ್‌ಲೈನ್‌ ನಲ್ಲಿ ಲೀಕ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ಈ ಸಿನಿಮಾ ಬಿಡುಗಡೆಗೂ ಮುಂಚೆಯೇ ಸಾಮಾಜಿಕ ತಾಣದಲಲಿ ಬಲಪಂಥೀಯರು ಈ ಸಿನಿಮಾದ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದರು. ಸೆ.9ರಂದು ಬ್ರಹ್ಮಾಸ್ತ್ರ ಸಿನಿಮಾ ಥಿಯೇಟರ್‌ ಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಅಕ್ರಮವಾಗಿ ಸೋರಿಕೆ ಮಾಡದಂತೆ ತಡೆಯುವ ಸಲುವಾಗಿ ಸ್ಟಾರ್‌ ಇಂಡಿಯಾ 18 ವೆಬ್‌ಸೈಟ್‌ ಗಳನ್ನು ನಿರ್ಬಂಧಿಸಲು ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಎಚ್ಚರಿಕೆಗಳ ಹೊರತಾಗಿಯೂ, ಚಲನಚಿತ್ರವು ಆನ್‌ಲೈನ್‌ನಲ್ಲಿ ತಮಿಳ್ ರಾಕರ್ಸ್, ಮೂವೀರುಲ್ಜ್, ಫಿಲ್ಮಿಜಿಲ್ಲಾ, 123 ಸಿನಿಮಾಸ್, ಟೆಲಿಗ್ರಾಮ್ ಮತ್ತು ಟೊರೆಂಟ್ ಸೈಟ್‌ಗಳಂತಹ ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.‌

ಬ್ರಹ್ಮಾಸ್ತ್ರವನ್ನು ಅಕ್ರಮವಾಗಿ ಸ್ಟ್ರೀಮ್ ಮಾಡದಂತೆ 18 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಕೋರಿ ಸ್ಟಾರ್ ಇಂಡಿಯಾದ ಮನವಿಯನ್ನು ದಿಲ್ಲಿ ಹೈಕೋರ್ಟ್ ಅನುಮತಿಸಿದೆ. ವಿವಿಧ ಸ್ಟ್ರೀಮಿಂಗ್ ವೆಬ್‌ಸೈಟ್‌ಗಳ ವಿರುದ್ಧ ಎಕ್ಸ್-ಪಾರ್ಟೆ ಆಡ್-ಮಧ್ಯಂತರ ತಡೆಯಾಜ್ಞೆ ಕೋರಿ ಕಂಪನಿಯು ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣವನ್ನು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿದ್ದು, ಅವರು ಅರ್ಜಿಯನ್ನು ತುರ್ತು ಆಧಾರದ ಮೇಲೆ ಆಲಿಸಲು ಒಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News