×
Ad

ಅಸ್ಸಾಂ: ಪೊಲೀಸರ ಸೂಚನೆಯ ಮೇರೆಗೆ ಮದರಸ ನೆಲಸಮ ಮಾಡಿದ್ದೇವೆಂದ ಗೋಲ್‌ಪಾರಾ ಗ್ರಾಮಸ್ಥರು

Update: 2022-09-10 15:11 IST

ಗುವಾಹಟಿ: ಈ ವಾರದ ಆರಂಭದಲ್ಲಿ ಮದರಸವನ್ನು ನೆಲಸಮಗೊಳಿಸಿದ(demolished madrassa) ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಹಳ್ಳಿಯ ನಿವಾಸಿಗಳು ಈಗ ಪೊಲೀಸರ ಸೂಚನೆ ಮೇರೆಗೆ ನಾವು ಹಾಗೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಪಿಟಿಐ ಶನಿವಾರ ವರದಿ ಮಾಡಿದೆ. ಆದರೆ, ಆರೋಪ ನಿರಾಧಾರ ಎಂದು ಪೊಲೀಸರು ಹೇಳಿದ್ದಾರೆ.

ಗೋಲ್ಪಾರಾದಲ್ಲಿನ ದರೋಗರ್ ಅಲ್ಗಾ ಚಾರ್ ಮದರಸಾದ ಬಳಿ ವಾಸಿಸುತ್ತಿದ್ದ ಸ್ಥಳೀಯರು ಮದರಸವನ್ನು  ಧ್ವಂಸಗೊಳಿಸಿದ್ದಾರೆ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಮದರಸದ ಧರ್ಮಗುರುವನ್ನು ಬಂಧಿಸಲಾಗಿದೆ ಎಂದು ಮಂಗಳವಾರ ವರದಿಯಾಗಿತ್ತು.

ಎರಡು ಕಟ್ಟಡಗಳನ್ನು ನೆಲಸಮಗೊಳಿಸಿದಾಗ ತಾನೂ ಇದ್ದೆ ಎಂದು ಶನಿವಾರ ಗ್ರಾಮಸ್ಥ ರಹೀಮ್ ಬಾದ್‌ಶಾ ಪಿಟಿಐಗೆ ತಿಳಿಸಿದರು.

"ನಾನು ನದಿಯ ದಡದಲ್ಲಿರುವ ನನ್ನ ಸೆಣಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಶುಕೂರ್ ಅಲಿ (ಮತ್ತೊಂದು ಹಳ್ಳಿಯವ)ನನ್ನನ್ನು ಮದರಸ ಕಾಂಪೌಂಡ್‌ಗೆ ಕರೆದ. ಕಟ್ಟಡಗಳನ್ನು ಕೆಡವಲು ಸಹಾಯ ಮಾಡುವಂತೆ  ನನ್ನನ್ನು ಹಾಗೂ ಇತರ  ಐದಾರು ಮಂದಿ ಬರುವಂತೆ ಕೇಳಿಕೊಂಡ" ಎಂದು ಬಾದ್‌ಶಾ ಹೇಳಿದ್ದಾರೆ.

ಅಲಿ ತಾನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ.

ತಾನು  ಮದರಸ ಆವರಣವನ್ನು ತಲುಪಿದಾಗ, ಕೆಲವು ಮಾಧ್ಯಮ ಪ್ರತಿನಿಧಿಗಳು ಆಗಲೇ ಅಲ್ಲಿದ್ದರು ಎಂದು ಬಾದ್ ಶಾ ಸುದ್ದಿ ಸಂಸ್ಥೆಗೆ ತಿಳಿಸಿದರು.

"ನಾವು ಮದರಸವನ್ನು ಏಕೆ ಕೆಡವಬೇಕು ಎಂದು ನಾನು ಅಲಿಯನ್ನು ಕೇಳಿದಾಗ, ಎಸ್ಪಿ (ಪೊಲೀಸ್ ಸೂಪರಿಂಟೆಂಡೆಂಟ್) ಹಾಗೂ ಡಿಎಸ್ಪಿ (ಉಪ ಪೊಲೀಸ್ ವರಿಷ್ಠಾಧಿಕಾರಿ) ಸರ್ ಗಳು ಹಾಗೆ ಮಾಡಲು ನಮಗೆ ಹೇಳಿದ್ದಾರೆಂದು ಉತ್ತರಿಸಿದ" ಎಂದು ಬಾದ್ ಶಾ ಹೇಳಿದರು.

ಈ ಆರೋಪಗಳು ಸಂಪೂರ್ಣ ಸುಳ್ಳು ಎಂದು ಗೋಲ್ಪಾರಾ ಪೊಲೀಸ್ ವರಿಷ್ಠಾಧಿಕಾರಿ ವಿ,ವಿ ರಾಕೇಶ್ ರೆಡ್ಡಿ ಹೇಳಿದ್ದಾರೆ ಎಂದು The Indian Express ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News