ವಿದೇಶಿ ಬ್ರ್ಯಾಂಡ್‌ ಟಿ-ಶರ್ಟ್‌ ಧರಿಸಿ ಭಾರತ ಜೋಡಿಸಲು ಹೊರಟಿದ್ದಾರೆ: ರಾಹುಲ್‌ ವಿರುದ್ಧ ಅಮಿತ್‌ ಶಾ ವ್ಯಂಗ್ಯ

Update: 2022-09-10 15:00 GMT

ಹೊಸದಿಲ್ಲಿ: 'ಭಾರತ್ ಜೋಡೋ' ಯಾತ್ರೆ(Bharat Jodo) ಹೊರಟಿರುವ ರಾಹುಲ್‌ ಗಾಂಧಿ(Rahul Gandhi) ವಿರುದ್ಧ ಬಿಜೆಪಿ ಹಾಗೂ ಅದರ ನಾಯಕರು ಮುಗಿಬಿದ್ದಿದ್ದಾರೆ. ರಾಹುಲ್‌ 41 ಸಾವಿರ ಬೆಲೆ ಟಿ-ಶರ್ಟ್‌ ಧರಿಸಿದ್ದಾರೆ ಎಂದು ಬಿಜೆಪಿ(BJP) ಟೀಕಿಸಿದ ಬೆನ್ನಲ್ಲೇ, ವಿದೇಶಿ ಟೀ ಶರ್ಟ್ ಧರಿಸಿ ದೇಶವನ್ನು ಒಗ್ಗೂಡಿಸುವ ಅಭಿಯಾನವನ್ನು ಕಾಂಗ್ರೆಸ್ ನಾಯಕ ಮುನ್ನಡೆಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Sha) ಶನಿವಾರ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದಾರೆ. 

ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ' ವಿರುದ್ಧ ತರಾಟೆಗೆ ತೆಗೆದುಕೊಂಡ ಅಮಿತ್‌ ಶಾ, ರಾಹುಲ್ ಮೊದಲು ಭಾರತದ ಇತಿಹಾಸವನ್ನು ಓದಬೇಕು ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ರಾಜಸ್ಥಾನದ ಗೆಹ್ಲೋಟ್ ಸರ್ಕಾರವು ವೋಟ್ ಬ್ಯಾಂಕ್ ಮತ್ತು ಓಲೈಕೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಶಾ ಆರೋಪಿಸಿದರು.  

ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯನ್ನು ಉಲ್ಲೇಖಿಸಿದ ಅವರು, " ವಿದೇಶಿ ಟಿ-ಶರ್ಟ್ ಧರಿಸಿ, ರಾಹುಲ್ ಬಾಬಾ ಭಾರತ ಜೋಡೋ ಯಾತ್ರೆಗೆ ಹೊರಟಿದ್ದಾರೆ, ಅವರು ಭಾರತವನ್ನು ಒಗ್ಗೂಡಿಸಲು ಹೊರಟಿದ್ದಾರೆ. ರಾಹುಲ್ ಬಾಬಾ ಮತ್ತು ಅವರು ಸಂಸತ್ತಿನಲ್ಲಿ ಕಾಂಗ್ರೆಸ್ಸಿಗರಿಗೆ ನೀಡಿದ ಭಾಷಣವನ್ನು ನಾನು   ನೆನಪಿಸುತ್ತೇನೆ. ಭಾರತ ಒಂದು ರಾಷ್ಟ್ರವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಬಾಬಾ, ನೀವು ಇದನ್ನು ಯಾವ ಪುಸ್ತಕದಲ್ಲಿ ಓದಿದ್ದೀರಿ? ಲಕ್ಷ ಲಕ್ಷ ಜನ ಪ್ರಾಣ ತ್ಯಾಗ ಮಾಡಿದ ರಾಷ್ಟ್ರವಿದು." ಎಂದು ಶಾ ಹೇಳಿದ್ದಾರೆ.

"ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ರಸ್ತೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ, ವಿದ್ಯುತ್ ನೀಡಲು ಸಾಧ್ಯವಿಲ್ಲ, ಉದ್ಯೋಗವನ್ನು ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ಓಲೈಕೆಯಿಂದ ಮಾತ್ರ ರಾಜಕೀಯ ಮಾಡಬಹುದು" ಎಂದು ಅಮಿತ್‌ ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News