ಚೀನಾದ ಹೆಚ್ಚಿನ ವೈದ್ಯಕೀಯ ಪದವೀಧರರು ಎಫ್‌ಎಂಜಿ ಪರೀಕ್ಷೆ ಉತ್ತೀರ್ಣರಾಗಿಲ್ಲ: ಭಾರತೀಯ ರಾಯಭಾರಿ ಕಚೇರಿ ಹೇಳಿಕೆ

Update: 2022-09-10 18:35 GMT

ಹೊಸದಿಲ್ಲಿ, ಸೆ. 10: ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದ ಬಹುತೇಕ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಪದವಿ (ಎಫ್‌ಎಂಜಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ ಎಂಬುದನ್ನು ಗಮನಿಸಿರುವ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಲಹಾ ಪತ್ರವೊಂದನ್ನು ಹೊರಡಿಸಿದೆ.

2015 ರಿಂದ 2021ರ ವರೆಗೆ ಚೀನಾ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಲ್ಲಿ ಕೇವಲ ಶೇ. 16 ವಿದ್ಯಾರ್ಥಿಗಳು ಮಾತ್ರ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಭಾರತದಿಂದ ಹೊರಗೆ ವೈದ್ಯಕೀಯ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ಹಾಗೂ ದೇಶದಲ್ಲಿ  ವೈದ್ಯಕೀಯ ವೃತ್ತಿ ನಡೆಸಲು ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆ ಉತ್ತೀರ್ಣರಾಗುವ ಅಗತ್ಯ ಇದೆ ಎಂದು ರಾಯಭಾರಿ ಕಚೇರಿ ಹೇಳಿದೆ. 

 ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆ ರಾಷ್ಟ್ರೀಯ ಪರೀಕ್ಷಾ ಮಂಡಳಿ. ಇದು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು ಪ್ರಮಾಣಿಕರಿಸುವ ಉಸ್ತುವಾರಿ ಹೊಂದಿದೆ. ಈ ಮಂಡಳಿ ನಡೆಸಿದ ಅಧ್ಯಯನ ನೀಡಿದ  ಅಂಕಿ ಅಂಶಗಳನ್ನು ರಾಯಭಾರಿ ಕಚೇರಿ ಉಲ್ಲೇಖಿಸಿದೆ. 2015ರಿಂದ 2021ರ ವರೆಗೆ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಗೆ ಹಾಜರಾಗಿದ್ದ 40,417 ವಿದ್ಯಾರ್ಥಿಗಳಲ್ಲಿ ಕೇವಲ 6,387 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ ಎಂಬುದನ್ನು ಅಧ್ಯಯನ ಬೆಳಕು ಚೆಲ್ಲಿದೆ.

ವೈದ್ಯಕೀಯ ಶಿಕ್ಷಣಕ್ಕೆ  ಚೀನಾ ವಿಶ್ವವಿದ್ಯಾನಿಲಯದ ಪ್ರವೇಶ ಕೋರಲು ನಿರ್ಧರಿಸಿರುವ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಈ ಅಂಶವನ್ನು ಗಮನಿಸಿ ಎಂದು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ. ಶಿಕ್ಷಕರ ಇಂಗ್ಲೀಷ್ ಭಾಷಾ ಕೌಶಲವನ್ನು ಸಾಮಾನ್ಯ ಸವಾಲಾಗಿ ಪಟ್ಟಿ ಮಾಡಿದ ಹಿಂದಿನ ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ ಎಂದು ಕೂಡ ರಾಯಭಾರಿ ಕಚೇರಿ ಹೇಳಿದೆ. ‘‘ನಿರ್ದಿಷ್ಟ ವಿಶ್ವವಿದ್ಯಾನಿಲಯಗಳಲ್ಲಿ ರೋಗಿಗಳೊಂದಿಗೆ ತೊಡಗಿಕೊಳ್ಳುವ ವಿಷಯದಲ್ಲಿ ಪ್ರಾಯೋಗಿಕ, ಕ್ಲಿನಿಕಲ್ ಅನುಭವದ ಕೊರತೆ ಕುರಿತು ಕೆಲವು ವಿದ್ಯಾರ್ಥಿಗಳು ದೂರಿದ್ದಾರೆ’’ ಎಂದ ಅದು ಹೇಳಿದೆ.

ವಿದೇಶಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಇಂಗ್ಲೀಷ್ ಭಾಷೆಯಲ್ಲಿ ನೀಡಲು ಚೀನಾದ ಕೇವಲ 45 ವಿಶ್ವವಿದ್ಯಾನಿಲಯಗಳು ಮಾತ್ರ ಅಧಿಕೃತತೆಯನ್ನು ಹೊಂದಿವೆ ಎಂದು ರಾಯಬಾರಿ ಕಚೇರಿ ತಿಳಿಸಿದೆ. ಚೀನಾದಲ್ಲಿ ಹೇರಲಾಗಿರುವ ಕೊರೊನಾ ವೈರಸ್ ನಿರ್ಬಂಧಗಳ ಬಗ್ಗೆ ಗಮನ ಹರಿಸುವಂತೆ ಕೂಡ ರಾಯಬಾರಿ ಕಚೇರಿ ವಿದ್ಯಾರ್ಥಿಗಳನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News