ಕಿರಿಯ ಸಹೋದ್ಯೋಗಿಗಳನ್ನು ಲಾಕಪ್‍ಗೆ ತಳ್ಳಿದ ಹಿರಿಯ ಪೊಲೀಸ್ ಅಧಿಕಾರಿ; ವೀಡಿಯೊ ವೈರಲ್

Update: 2022-09-11 03:25 GMT

ಪಾಟ್ನಾ: ಕಿರಿಯ ಸಹೋದ್ಯೋಗಿಗಳ ಕೆಲಸ ಸಮಾಧಾನಕರವಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐದು ಮಂದಿ ಕಿರಿಯ ಸಹೋದ್ಯೋಗಿಗಳನ್ನು ಲಾಕಪ್‍ಗೆ ತಳ್ಳಿರುವ ಘಟನೆ ಬಗೆಗಿನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅಧಿಕಾರಿ ಇದನ್ನು ನಿರಾಕರಿಸಿದ್ದಾರೆ.

ಸೆ. 8ರಂದು ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಗೌರವ್ ಮಂಗ್ಲಾ ಅವರ ವಿರುದ್ಧ ತನಿಖೆ ನಡೆಸುವಂತೆ ಬಿಹಾರ ಪೊಲೀಸ್ ಅಸೋಸಿಯೇಶನ್ ಅಗ್ರಹಿಸಿದೆ.

ಸಬ್ ಇನ್‍ಸ್ಪೆಕ್ಟರ್‌ಗಳಾದ ಶತ್ರುಘ್ನ ಪಾಸ್ವಾನ್ ಹಾಗೂ ರಾಮ್‍ರೇಖಾ ಸಿಂಗ್, ಎಎಸ್‍ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ ಅರೋನ್ ಅವರು ನವಡ ನಗರ ಪೊಲೀಸ್ ಠಾಣೆಯ ಲಾಕಪ್‍ನ ಒಳಗೆ ಇರುವ ದೃಶ್ಯ ಭದ್ರತಾ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಾಣಿಸುತ್ತಿದೆ. ಮಧ್ಯರಾತ್ರಿ ಅವರನ್ನು ಲಾಕಪ್‍ಗೆ ತಳ್ಳಲಾಗಿದ್ದು, ಎರಡು ಗಂಟೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಎಸ್ಪಿ ಮಂಗ್ಲ ನಿರಾಕರಿಸಿದ್ದು, ಇಂಥ ಯಾವ ಘಟನೆಯೂ ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್‍ಸ್ಪೆಕ್ಟರ್ ವಿಜಯ ಕುಮಾರ್ ಸಿಂಗ್ ಕೂಡಾ ಮೇಲಾಧಿಕಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಬಲ್ಲ ಮೂಲಗಳ ಪ್ರಕಾರ, ಎಸ್ಪಿ ಸೆಪ್ಟೆಂಬರ್ 8ರಂದು ಪ್ರಕರಣಗಳ ಪರಾಮರ್ಶೆಗಾಗಿ ರಾತ್ರಿ 9 ಗಂಟೆ ವೇಳೆ ಠಾಣೆಗೆ ಭೇಟಿ ನೀಡಿದ್ದಾರೆ. ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ ಎನ್ನಲಾಗಿದ್ದು, ಇದರಿಂದ ಕೋಪಗೊಂಡು ಅವರನ್ನು ಲಾಕಪ್‍ಗೆ ತಳ್ಳುವಂತೆ ಸೂಚಿಸಿದರು. ಆದರೆ ಯಾವ ನಿರ್ಲಕ್ಷ್ಯ ಎನ್ನುವುದು ತಿಳಿದುಬಂದಿಲ್ಲ ಹಾಗೂ ಎಸ್ಪಿ ಕೂಡಾ ಈ ಬಗ್ಗೆ ಏನೂ ಹೇಳಿಲ್ಲ.

ಘಟನೆ ಬಗೆಗಿನ ವೀಡಿಯೊ ಮರುದಿನ ವಾಟ್ಸಪ್‍ನಲ್ಲಿ ವೈರಲ್ ಆಗಿದ್ದು, ಇದು ಸುಳ್ಳು ಸುದ್ದಿ ಎಂದು ಎಸ್ಪಿ ಹೇಳಿದ್ದಾರೆ. ಆದರೆ ಸುದ್ದಿ ಮಾತ್ರ ಹರಿದಾಡುತ್ತಲೇ ಇದೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಕೂಡಾ ಹರಿದಾಡುತ್ತಿದೆ.

ಈ ಘಟನೆ ಬಗ್ಗೆ ಚರ್ಚಿಸಲು ಎಸ್ಪಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದಾಗ ಎಸ್ಪಿ ಕರೆ ಸ್ವೀಕರಿಸಿಲ್ಲ ಎನ್ನವುದು ಬಿಹಾರ ಪೊಲೀಸ್ ಸಂಘದ ಅಧ್ಯಕ್ಷ ಮೃತ್ಯುಂಜಯ ಸಿಂಗ್ ಅವರ ಆರೋಪ ಎಂದು ndtv.com ವರದಿ ಮಾಡಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News