ಆರ್ಟಿಕಲ್‌ 370 ರನ್ನು ಪುನಸ್ಥಾಪಿಸಲು ಸಾಧ್ಯವಿಲ್ಲ, ಜನರನ್ನು ದಾರಿತಪ್ಪಿಸಬೇಡಿ: ಗುಲಾಂ ನಬಿ ಆಜಾದ್‌

Update: 2022-09-11 14:48 GMT

ಶ್ರೀನಗರ,ಸೆ.11: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ತನ್ನದೇ ಆದ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಲು ಸಜ್ಜಾಗಿರುವ ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ರವಿವಾರ ಹೇಳಿದರು. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಎರಡು ವರ್ಷಗಳ ಹಿಂದೆ 370ನೇ ವಿಧಿಯನ್ನು ಹಿಂದೆಗೆದುಕೊಂಡಿತ್ತು.

‌ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ತನ್ನ ಮೊದಲ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಆಝಾದ್,370ನೇ ವಿಧಿಯ ಮರುಸ್ಥಾಪನೆಗೆ ಒತ್ತಾಯಿಸುವುದಾಗಿ ಭರವಸೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವುದಕ್ಕಾಗಿ ಪ್ರಾದೇಶಿಕ ಪಕ್ಷಗಳ ವಿರುದ್ಧ ದಾಳಿ ನಡೆಸಿದರು.

‘ಗುಲಾಂ ನಬಿ ಆಝಾದ್ ಯಾರನ್ನೂ ದಾರಿ ತಪ್ಪಿಸುವುದಿಲ್ಲ. ಮತಗಳಿಗಾಗಿ ನಾನು ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ ಮತ್ತು ಶೋಷಣೆ ಮಾಡುವುದಿಲ್ಲ. ದಯವಿಟ್ಟು ಸಾಧಿಸಲಾಗದ ವಿಷಯಗಳನ್ನು ಕೆದಕಬೇಡಿ. 370ನೇ ವಿಧಿಯ ಮರುಸ್ಥಾಪನೆ ಸಾಧ್ಯವಿಲ್ಲ,ಅದಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ’ ಎಂದು ಆಝಾದ್ ಹೇಳಿದರು.

 ಕಾಂಗ್ರೆಸ್ ಪ್ರತಿ ಚುನಾವಣೆಯಲ್ಲಿಯೂ ಅಧೋಗತಿಗಿಳಿಯುತ್ತಿದೆ ಮತ್ತು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಬಹುದಾದ ಹಾಗೂ 370ನೇ ವಿಧಿಯನ್ನು ಮರುಸ್ಥಾಪಿಸುವ ಬೇರೆ ಯಾವುದೇ ಪಕ್ಷ ಭಾರತದಲ್ಲಿಲ್ಲ ಎಂದರು. ಶೋಷಣೆ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಹೋರಾಡಲು ಮುಂದಿನ ಹತ್ತು ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ತನ್ನ ನೂತನ ಪಕ್ಷಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ ಅವರು,ಶೋಷಣೆಯ ರಾಜಕೀಯವು ಕಾಶ್ಮೀರದಲ್ಲಿ ಒಂದು ಲಕ್ಷ ಜನರ ಹತ್ಯೆಗೆ ಕಾರಣವಾಗಿದೆ. ಅದು ಐದು ಲಕ್ಷ ಮಕ್ಕಳನ್ನು ಅನಾಥರನ್ನಾಗಿಸಿದೆ ಮತ್ತು ಭಾರೀ ವ್ಯಾಕುಲತೆಯನ್ನುಂಟು ಮಾಡಿದೆ ಎಂದು ಹೇಳಿದರು.

ತನ್ನ ರಾಜಕೀಯ ಭವಿಷ್ಯಕ್ಕೆ ಧಕ್ಕೆಯುಂಟಾಗುತ್ತಿದ್ದರೂ ಶೋಷಣೆ ಮತ್ತು ಸುಳ್ಳಿನ ವಿರುದ್ಧ ಹೋರಾಡಲು ತಾನು ಜಮ್ಮು-ಕಾಶ್ಮೀರಕ್ಕೆ ಬಂದಿದ್ದೇನೆ ಎಂದರು. 370ನೇ ವಿಧಿಯ ಮರುಸ್ಥಾಪನೆ ಅಭಿಯಾನ ಒಪ್ಪಂದಕ್ಕೆ ಸಹಿ ಹಾಕಿರುವ ಕಾಂಗ್ರೆಸ್ ಮತ್ತು ಹೆಚ್ಚಿನ ಪ್ರಾದೇಶಿಕ ಪಕ್ಷಗಳಿಗಿಂತ ಆಝಾದ್ ನಿಲುವು ಭಿನ್ನವಾಗಿದೆ.

‘ಜನರನ್ನು ಆಂದೋಲನಕ್ಕೆ ಪ್ರಚೋದಿಸುವುದು ಮತ್ತು ಅವರು ಕೊಲ್ಲಲ್ಪಡುವಂತೆ ಮಾಡುವುದು ಇನ್ನೊಂದು ವಂಚನೆಯಾಗಿದೆ. ನಾನು ಜೀವಂತವಿರುವವರೆಗೆ ಸುಳ್ಳಿನ ವಿರುದ್ಧ ಹೋರಾಡುತ್ತೇನೆ. ನನ್ನ ಧ್ವನಿಯನ್ನು ಮೌನವಾಗಿಸಲು ನೀವು ಬಯಸಿದರೆ ನನ್ನನ್ನು ಕೊಲ್ಲಬೇಕು ’ಎಂದು ಹೇಳಿದ ಆಝಾದ್,ರಾಜ್ಯ ಸ್ಥಾನಮಾನದ ಮರುಸ್ಥಾಪನೆ,ಜಮ್ಮು-ಕಾಶ್ಮೀರ ನಿವಾಸಿಗಳಿಗಾಗಿ ಉದ್ಯೋಗಗಳು ಮತ್ತು ಭೂಮಿಯ ರಕ್ಷಣೆ, ಹೀಗೆ ಸಾಧಿಸಬಹುದಾದ ವಿಷಯಗಳಲ್ಲಿ ತಾನು ಹೋರಾಡುತ್ತೇನೆ ಎಂದು ಭರವಸೆ ನೀಡಿದರು.
 
‘ನಾನು ಸ್ಥಾನಗಳನ್ನು ಗೆಲ್ಲಲು ಭಾವನಾತ್ಮಕ ಘೋಷಣೆಗಳನ್ನು ಕೂಗುವುದಿಲ್ಲ. ನಾವು ರಾಜ್ಯ ಸ್ಥಾನಮಾನದ ಮರುಸ್ಥಾಪನೆಗಾಗಿ ಹೋರಾಡಬೇಕಿದೆ. ಅದಕ್ಕಾಗಿ ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ ’ ಎಂದು ಹೇಳಿದರು. ತಾನು ಮುಖ್ಯಮಂತ್ರಿಯಾಗಿದ್ದಾಗ ಹೇಗೆ ನಕಲಿ ಎನ್ಕೌಂಟರ್ಗಳನ್ನು ತಡೆದಿದ್ದೆ ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸಿದ್ದೆ ಎನ್ನುವುದನ್ನು ಆಝಾದ್ ಜನರಿಗೆ ನೆನಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News