ʼನೀವು ಭಾರತದ ಮಕ್ಕಳಾಗಿದ್ದರೆ ಗೋಡ್ಸೆ ಮುರ್ದಾಬಾದ್‌ ಎನ್ನಿʼ: ವಿಶ್ವಹಿಂದೂ ಪರಿಷತ್‌ ಗೆ ಕುನಾಲ್‌ ಕಾಮ್ರಾ ಸವಾಲು

Update: 2022-09-11 13:18 GMT
Comedian Kunal Kamra, Photo: Youtube

ಹೊಸದಿಲ್ಲಿ: ಸ್ಟ್ಯಾಂಡ್-ಅಪ್‌ ಕಾಮೆಡಿಯನ್ ಕುನಾಲ್ ಕಮ್ರಾ ರವಿವಾರ ವಿಶ್ವ ಹಿಂದೂ ಪರಿಷತ್‌ಗೆ ಪತ್ರ ಬರೆದಿದ್ದು, ತನ್ನ ವಿರುದ್ಧ ಹಿಂದೂ ದೇವತೆಗಳನ್ನು ಗೇಲಿ ಮಾಡಿದ್ದಾರೆ ಎಂಬ ಹಿಂದುತ್ವ ಗುಂಪಿನ ಆರೋಪವನ್ನು ಸಾಬೀತುಪಡಿಸುವಂತೆ ಕೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಶುಕ್ರವಾರ ಗುರುಗ್ರಾಮ್ ಆಡಳಿತಕ್ಕೆ ಕಮ್ರಾ ವಿರುದ್ಧ ದೂರು ನೀಡಿದ್ದು, ಕಮ್ರಾ ಹಿಂದೂಗಳ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಹಾಸ್ಯ ಮಾಡುತ್ತಾರೆ ಎಂದು ಆರೋಪಿಸಿತ್ತು, ಅಲ್ಲದೆ, ಕಮ್ರಾ ಅವರ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ಬೆದರಿಕೆ ಹಾಕಿತ್ತು. ಹಿಂದುತ್ವ ಗುಂಪುಗಳ ಬೆದರಿಕೆಗೆ ಮಣಿದಿದ್ದ ಆಯೋಜಕರು ಕಾರ್ಯಕ್ರಮವನ್ನು ರದ್ದುಪಡಿಸಿದ್ದರು.   

ಭಜರಂಗದಳದ ಜಿಲ್ಲಾ ಸಂಯೋಜಕ ಪ್ರವೀಣ್ ಸೈನಿ ಮಾತನಾಡಿ, ಸ್ಥಳೀಯಾಡಳಿತಕ್ಕೆ ಕಮ್ರಾ ಅವರ ವೀಡಿಯೊಗಳನ್ನು ತೋರಿಸಲಾಗಿದೆ ಮತ್ತು ಹಿಂದೂ ನಂಬಿಕೆಯ ಮೇಲೆ ದಾಳಿ ಮಾಡುವವರಿಗೆ ಗುರುಗ್ರಾಮ್‌ನಲ್ಲಿ ಪ್ರದರ್ಶನ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. 
ರವಿವಾರ ಪತ್ರ ಬರೆದ ಕಮ್ರಾ, ತಾನು ಹಿಂದೂ ದೇವರುಗಳನ್ನು ಗೇಲಿ ಮಾಡಿರುವ ವಿಡಿಯೋ ಕ್ಲಿಪ್‌ಗಳನ್ನು ತೋರಿಸುವಂತೆ ವಿಶ್ವ ಹಿಂದೂ ಪರಿಷತ್‌ಗೆ ಸವಾಲು ಹಾಕಿದ್ದಾರೆ.

"ನಾನು ಸರ್ಕಾರದ ಬಗ್ಗೆ ವ್ಯಂಗ್ಯ ಮಾಡುತ್ತೇನೆ. ನೀವು ಸರ್ಕಾರದ ಸಾಕುಪ್ರಾಣಿಗಳಾಗಿದ್ದರೆ, ನಿಮಗೆ ನೋವಾಗಬಹುದು. ಇದರಲ್ಲಿ ಹಿಂದೂಗಳು ಹೇಗೆ ಬಂದರು? ದೇವರೊಂದಿಗಿನ ನನ್ನ ಸಂಬಂಧದ ಬಗ್ಗೆ ಯಾರಿಗಾದರೂ ಸಾಬೀತುಪಡಿಸಬೇಕೆಂದು ನಾನು ಭಾವಿಸುವುದಿಲ್ಲ” ಎಂದು ಕಮ್ರಾ ಹೇಳಿದ್ದಾರೆ.


ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಧರ್ಮವನ್ನು ಸಂಘಟನೆಯು ಪ್ರತಿನಿಧಿಸುವುದಿಲ್ಲವಾದ್ದರಿಂದ ಸಂಘಟನೆಯ ಹೆಸರಿನ ಮುಂದೆ ಇರುವ ʼವಿಶ್ವʼ ಎಂಬ ಪದವನ್ನು ತಮ್ಮ ಪತ್ರದಲ್ಲಿ ಕಮ್ರಾ ಲಗತ್ತಿಸಿಲ್ಲವೆಂದು ತಿಳಿಸಿದ್ದಾರೆ. ಸಂಘಟನೆಯು ತನ್ನನ್ನು ತಾನು ನಿಜವಾದ ಭಾರತೀಯ ಎಂದು ಪರಿಗಣಿಸಿದರೆ,   ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಖಂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

"ನೀವು ನಿಜವಾಗಿಯೂ ಭಾರತದ ಮಕ್ಕಳಾಗಿದ್ದರೆ, ಗೋಡ್ಸೆ ಮುರ್ದಾಬಾದ್ ಎಂದು ಬರೆಯಿರಿ.  ಇಲ್ಲದಿದ್ದರೆ ನೀವು ಹಿಂದೂ ವಿರೋಧಿ ಮತ್ತು ಭಯೋತ್ಪಾದನೆಯ ಪರ ಎಂದು ನಾನು ಭಾವಿಸುತ್ತೇನೆ. ನೀವು ಗೋಡ್ಸೆಯನ್ನು ದೇವರೆಂದು ಪರಿಗಣಿಸುವುದಿಲ್ಲ, ಅಲ್ಲವೇ?” ಎಂದು ಕಮ್ರಾ ಪ್ರಶ್ನಿಸಿದ್ದಾರೆ. 

 
ಅಲ್ಲದೆ, ವಿಶ್ವ ಹಿಂದೂ ಪರಿಷತ್ತಿನ ಸದಸ್ಯರಿಗಿಂತ ತಾನು ಉತ್ತಮ ಹಿಂದೂ ಎಂದು ಕಮ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News