ಕೇಜ್ರಿವಾಲ್ ಸರಕಾರದಿಂದ ಬಸ್ ಗಳ ಖರೀದಿ ಕುರಿತು ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಶಿಫಾರಸು‌

Update: 2022-09-11 14:55 GMT
Vinai Kumar Saxena

ಹೊಸದಿಲ್ಲಿ,ಸೆ.11: ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು 2019 ಮತ್ತು 2020ರಲ್ಲಿ ದಿಲ್ಲಿ ಸರಕಾರದಿಂದ 1,000 ಲೋಫ್ಲೋರ್ ಬಸ್‌ಗಳ ಖರೀದಿಯಲ್ಲಿ ಅಕ್ರಮಗಳ ಆರೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿದೆ.

ಲೆ.ಗವರ್ನರ್ ಕಚೇರಿಯು ಕಳೆದ ಜುಲೈನಲ್ಲಿ ಬಸ್‌ಗಳ ಖರೀದಿಯಲ್ಲಿ ಅಕ್ರಮಗಳ ಕುರಿತು ದೂರನ್ನು ಸ್ವೀಕರಿಸಿತ್ತು. ಟೆಂಡರ್ ಮತ್ತು ಬಸ್‌ಗಳ ಖರೀದಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರನ್ನಾಗಿ ದಿಲ್ಲಿಯ ಸಾರಿಗೆ ಸಚಿವರ ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆದಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಕ್ರಮಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಟೆಂಡರ್ಗೆ ಬಿಡ್ ನಿರ್ವಹಣೆ ಸಮಾಲೋಚಕರಾಗಿ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ ಸಂಸ್ಥೆಯನ್ನು ನೇಮಕಗೊಳಿಸಲಾಗಿತ್ತು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
ಜುಲೈನಲ್ಲಿ ಲೆಫ್ಟಿನಂಟ್ ಗವರ್ನರ್ ಅವರು ಪ್ರತಿಕ್ರಿಯೆಯನ್ನು ಕೋರಿ ದೂರನ್ನು ದಿಲ್ಲಿಯ ಮುಖ್ಯ ಕಾರ್ಯದರ್ಶಿ ನರೇಶ ಕುಮಾರ್ ಅವರಿಗೆ ರವಾನಿಸಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿವೆ ಎಂದು ಕುಮಾರ್ ತನ್ನ ಉತ್ತರದಲ್ಲಿ ಆರೋಪಿಸಿದ್ದರು.
ದೂರಿನ ಬಳಿಕ ಬಸ್‌ಗಳ ಖರೀದಿಗಾಗಿ ಟೆಂಡರ್‌ನ್ನು ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News