ಶೀಘ್ರವೇ ರಾಷ್ಟ್ರೀಯ ಪಕ್ಷ ಪ್ರಾರಂಭಿಸುವುದಾಗಿ ಘೋಷಿಸಿದ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ ರಾವ್
ಹೊಸದಿಲ್ಲಿ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್(K Chandrashekhar Rao) ಅವರು ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ರವಿವಾರ ಘೋಷಿಸಿದ್ದು, ಅದರ ನೀತಿಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
"ತೆಲಂಗಾಣ ಚಳವಳಿಯ ಆರಂಭದ ಮೊದಲು ನಾವು ಮಾಡಿದಂತೆ ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರು ಮತ್ತು ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸುದೀರ್ಘ ಚರ್ಚೆಯ ನಂತರ ಪರ್ಯಾಯ ರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಒಮ್ಮತಕ್ಕೆ ಬರಲಾಗಿದೆ" ಎಂದು ಕೆಸಿಆರ್ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
"ಶೀಘ್ರದಲ್ಲೇ, ರಾಷ್ಟ್ರೀಯ ಪಕ್ಷದ ರಚನೆ ಮತ್ತು ಅದರ ನೀತಿಗಳ ರಚನೆ ನಡೆಯಲಿದೆ" ಎಂದು ಪ್ರಕಟಣೆ ಹೇಳಿದೆ.
ಕಳೆದ ಕೆಲವು ತಿಂಗಳಿನಿಂದ, ಕೆಸಿಆರ್ ಅವರು ರಾಷ್ಟ್ರೀಯ ರಾಜಕೀಯದಲ್ಲಿ ದೊಡ್ಡ ಪಾತ್ರವನ್ನು ವಹಿಸಲು ಓಡಾಡುತ್ತಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ರಾಷ್ಟ್ರೀಯ ಪರ್ಯಾಯದ ಅಗತ್ಯವಿದೆ ಎಂದು ಕೆಸಿಆರ್ ಹೇಳಿದ್ದರು. ಅವರ ಪಕ್ಷದ ಸಹೋದ್ಯೋಗಿಗಳು ರಾಷ್ಟ್ರೀಯ ಪಕ್ಷವನ್ನು ರಚಿಸಲು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ಅದೇ ವೇಳೆ ತಿಳಿಸಿದ್ದರು.
ಕೆಸಿಆರ್ ಅವರ ಪ್ರಸ್ತುತ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿಯ ಮಾದರಿಯಲ್ಲಿ ಹೊಸ ಪಕ್ಷವನ್ನು ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಕರೆಯಲಾಗುವುದು ಎಂಬ ಊಹಾಪೋಹ ಎದ್ದಿದೆ.
ಪಕ್ಷ ರಚನೆಯಾದ ನಂತರ, ರಾವ್ ಅವರು ಪಕ್ಷದ ಸಮಿತಿಗಳನ್ನು ರಚಿಸಲು ಮತ್ತು ರಾಜಕೀಯ ಚಟುವಟಿಕೆಗಳನ್ನು ಪ್ರಾರಂಭಿಸಲು ವಿವಿಧ ರಾಜ್ಯಗಳಿಗೆ ಪ್ರವಾಸ ಮಾಡುವ ನಿರೀಕ್ಷೆಯಿದೆ. ಅವರು ಇತ್ತೀಚೆಗೆ ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಭೇಟಿ ಮಾಡುವುದನ್ನು ಮುಂದುವರೆಸಿದ್ದಾರೆ. ಅದರ ಭಾಗವಾಗಿ ನಿತೀಶ್ ಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಭೇಟಿಯಾಗಿದ್ದರು. ಹೊಸ ಪಕ್ಷವು ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪಕ್ಷದ ಮೂಲಗಳು ಸೂಚಿಸುತ್ತವೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುಜರಾತ್, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನೂತನ ಪಕ್ಷವು ತನ್ನ ಚೊಚ್ಚಲ ಪ್ರವೇಶವನ್ನು ಮಾಡಬಹುದು.