ಗುಜರಾತ್: ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 4 ಕಾರ್ಮಿಕರು ಸಾವು, 20 ಮಂದಿಗೆ ಗಾಯ
ಗಾಂಧಿನಗರ (ಗುಜರಾತ್), ಸೆ. 10: ಸೂರತ್‌ನ ಸಚಿನ್ ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೋರೇಶನ್ (ಜಿಐಡಿಸಿ) ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಗಢದಿಂದ ಕನಿಷ್ಠ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.
ಸಚಿನ್ ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (ಜಿಐಡಿಸಿ) ಪ್ರದೇಶದಲ್ಲಿರುವ ಅನುಪಮ್ ರಸಾಯನ ಇಂಡಿಯಾ ಲಿಮಿಟೆಡ್‌ನ ರಾಸಾಯನಿಕ ಕಂಟೈನರ್‌ನಲ್ಲಿ ಶನಿವಾರ ರಾತ್ರಿ ಸ್ಫೋಟಗೊಂಡಿತು ಹಾಗೂ ಬೆಂಕಿ ಇತರ ಕಡೆ ಹಬ್ಬಿತು ಎಂದು ಸೂರತ್‌ನ ಅಗ್ನಿ ಶಾಮಕ ದಳದ ಉಸ್ತುವಾರಿ ಅಧಿಕಾರಿ ಬಸಂತ್ ಪರೀಕ್ ಅವರು ತಿಳಿಸಿದ್ದಾರೆ.
ಗಾಯಗೊಂಡವರು ಸೂರತ್‌ನ ವಿವಿಧ ಆಸ್ಪತ್ರೆಗಳಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿರುವ ಮಾಹಿತಿ ತಿಳಿದ ಕೂಡಲೇ 15 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಸುಮಾರು ಎರಡು ಗಂಟೆಗಳ ತೀವ್ರ ಪ್ರಯತ್ನದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂತು ಎಂದು ಪಾರೀಕ್ ಅವರು ಹೇಳಿದ್ದಾರೆ.
ಕಾರ್ಖಾನೆಯಲ್ಲಿ ಸುಟ್ಟು ಕರಕಲಾದ ಒಂದು ಮೃತದೇಹ ಶನಿವಾರ ರಾತ್ರಿ ಪತ್ತೆಯಾಗಿತ್ತು. ನಾಪತ್ತೆಯಾದ ಇತರ ಮೂವರು ಕಾರ್ಮಿಕರ ಮೃತದೇಹ ರವಿವಾರ ಕಾರ್ಖಾನೆಯ ಆವರಣದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಡಿ.ವಿ. ಬಲ್ದಾನಿಯಾ ಅವರು ತಿಳಿಸಿದ್ದಾರೆ.
ಕಾರ್ಖಾನೆಯ ಒಂದು ಉತ್ಪಾದನಾ ಬ್ಲಾಕ್‌ನಲ್ಲಿ ‘‘ದುರಾದೃಷ್ಟದಿಂದ ಬೆಂಕಿ ಅವಘಡ’’ ಸಂಭವಿಸಿದೆ ಎಂದು ಅನುಪಮ ರಸಾಯನ ಕಂಪೆನಿಯ ಹೇಳಿಕೆ ತಿಳಿಸಿದೆ.
‘‘ಬೆಂಕಿ ಅವಘಡದ ಕಾರಣದ ಬಗ್ಗೆ ನಮ್ಮ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಪ್ರಸ್ತುತ ನಮ್ಮ ಆದ್ಯತೆ ಕಾರ್ಮಿಕರು ಹಾಗೂ ಉದ್ಯೋಗಿಗಳು. ಜವಾಬ್ದಾರಿಯುತ ಕಾರ್ಪೋರೇಟ್ ಆಗಿ ನಾವು ಬೆಂಕಿ ಅವಘಡದಿಂದ ಸಂತ್ರಸ್ತರಾದ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ’’ ಎಂದು ಕಂಪೆನಿ ಹೇಳಿದೆ.