ವಾಯವ್ಯ ಭಾರತದಲ್ಲಿ ವ್ಯಾಪಕ ಮಳೆ ನಿರೀಕ್ಷೆ : ಹವಾಮಾನ ಇಲಾಖೆ

Update: 2022-09-12 02:26 GMT

ಹೊಸದಿಲ್ಲಿ: ಉತ್ತರಾಖಂಡ ಮತ್ತು ಪೂರ್ವ ರಾಜಸ್ಥಾನ ಸೇರಿದಂತೆ ವಾಯವ್ಯ ಭಾರತದ ಹಲವು ಕಡೆಗಳಲ್ಲಿ ಸೆಪ್ಟೆಂಬರ್ 15ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಮುಂಗಾರು ಹಿಂತೆಗೆತ ಪ್ರಕ್ರಿಯೆ ವಿಳಂಬಗೊಳ್ಳುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಪ್ರಕಟಿಸಿದೆ.

ವಾಡಿಕೆಯಂತೆ ಸೆಪ್ಟೆಂಬರ್ 17ಕ್ಕೆ ಮುಂಗಾರು ಹಿಂತೆಗೆತ ಆರಂಭವಾಗುತ್ತದೆ. ಕಳೆದ ವರ್ಷ ಅಕ್ಟೋಬರ್ ಮಧ್ಯಭಾಗದ ವೇಳೆಗೆ ಮುಂಗಾರು ಮತ್ತೆ ಅಬ್ಬರಿಸಿದ್ದು, ಅಕ್ಟೋಬರ್ 25ರ ಬಳಿಕ ಮುಂಗಾರು ಹಿಂತೆಗೆತ ಆರಂಭವಾಗಿತ್ತು. ಇದು 1975ರ ಬಳಿಕ ಏಳನೇ ಅತ್ಯಂತ ವಿಳಂಬಿತ ಹಿಂತೆಗೆತ ಎನಿಸಿಕೊಂಡಿತ್ತು. ವಾಡಿಕೆಯಂತೆ ಅಕ್ಟೋಬರ್ 15ರ ವೇಳೆಗೆ ಮುಂಗಾರು ಹಿಂತೆಗೆತ ಪ್ರಕ್ರಿಯೆ ದೇಶಾದ್ಯಂತ ಪೂರ್ಣಗೊಳ್ಳುತ್ತದೆ.

ದಕ್ಷಿಣ ಒಡಿಶಾದಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಇದು ವಾಯವ್ಯದ ಕಡೆಗೆ ಚಲಿಸಿ ದಕ್ಷಿಣ ಒಡಿಶಾ ಹಾಗೂ ಛತ್ತೀಸ್‍ಗಢದತ್ತ ಮುಂದಿನ 24 ಗಂಟೆಗಳಲ್ಲಿ ಬೀಸಲಿದೆ. ಬಳಿಕ ಕ್ರಮೇಣ ದುರ್ಬಲವಾಗಲಿದೆ ಎಂದು ಇಲಾಖೆ ಹೇಳಿದೆ.

ಮುಂಗಾರು ಮಳೆ ದಕ್ಷಿಣ ರಾಜ್ಯಗಳಲ್ಲಿ ಸಹಜ ಸ್ಥಿತಿಯಲ್ಲಿದ್ದು, ಮುಂದಿನ ಮೂರು ದಿನಗಳ ವರೆಗೆ ಮುಂದುವರಿಯಲಿದೆ. ಅರಬ್ಬಿ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಅಂದರೆ ದಕ್ಷಿಣ ಮಹಾರಾಷ್ಟ್ರ, ಗೋವಾ ಕರಾವಳಿಯಲ್ಲಿ ಬಿರುಗಾಳಿ ಪ್ರಸರಣವಾಗುತ್ತಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಪ್ರಸಕ್ತ ವರ್ಷ ವಾಡಿಕೆಗಿಂತ ಶೇಖಡ 5ರಷ್ಟು ಅಧಿಕ ಮಳೆಯಾಗಿದ್ದು, ಪರ್ಯಾಯದ್ವೀಪ ಪ್ರದೇಶದಲ್ಲಿ ಶೇಕಡ 34ರಷ್ಟು ಅಧಿಕ ಮಳೆ ಬಿದ್ದಿದೆ. ಕೇಂದ್ರ ಭಾರತದಲ್ಲಿ ಶೇಕಡ 15ರಷ್ಟು ಅಧಿಕ ಮಳೆಯಾಗಿದ್ದರೆ, ಈಶಾನ್ಯ ಭಾರತದಲ್ಲಿ ಶೇಕಡ 18ರಷ್ಟು ಮಳೆ ಕೊರತೆ ಉಂಟಾಗಿದೆ. ವಾಯವ್ಯ ಭಾರತದಲ್ಲಿ ಶೇಕಡ 7ರಷ್ಟು ಮಳೆ ಕಡಿಮೆಯಾಗಿದೆ ಎಂದು hindustantimes.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News