ಗುಜರಾತ್‌ ನಲ್ಲಿರುವ ಪಕ್ಷದ ಕಚೇರಿ ಮೇಲೆ ಪೊಲೀಸ್ ದಾಳಿ ನಡೆದಿದೆ ಎಂದು ಆರೋಪಿಸಿದ ಆಮ್‌ ಆದ್ಮಿ ಪಕ್ಷ

Update: 2022-09-12 06:34 GMT

ಹೊಸದಿಲ್ಲಿ: ಗುಜರಾತ್‍ನ ಅಹ್ಮದಾಬಾದ್‍ನಲ್ಲಿರುವ(Ahmadabad) ಆಮ್ ಆದ್ಮಿ ಪಕ್ಷದ ಕಚೇರಿಯ(AAP Office) ಮೇಲೆ ರವಿವಾರ ಪೊಲೀಸರು ದಾಳಿ ನಡೆಸಿದ್ದಾರೆಂದು(Police) ಪಕ್ಷ ಹೇಳಿಕೊಂಡಿದೆ. ಗುಜರಾತ್‍ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೊರಕುತ್ತಿರುವ ವ್ಯಾಪಕ ಬೆಂಬಲದಿಂದ ಬಿಜೆಪಿ ಕಂಗೆಟ್ಟಿರುವುದರಿಂದ ಈ ದಾಳಿ ನಡೆಸಲಾಗಿದೆ ಎಂದು ಆಪ್ ಹೇಳಿಕೊಂಡಿದೆ.

ಆಪ್ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೆಪ್ಟೆಂಬರ್ 11 ರಂದು ಗುಜರಾತ್‍ಗೆ ಆಗಮಿಸಿದ ಕೆಲವೇ ಹೊತ್ತಿನಲ್ಲಿ ಪಕ್ಷದ ಕಚೇರಿ ಮೇಲೆ ದಾಳಿ ನಡೆದಿದೆ ಎಂದು ಆಪ್ ಹೇಳಿಕೊಂಡಿದೆ.

ಈ ದಾಳಿ ವೇಳೆ ಪೊಲೀಸರಿಗೆ ಏನೂ ದೊರಕಿಲ್ಲ, ಏಕೆಂದರೆ ಆಪ್ ನಾಯಕರು ಮತ್ತು ಕಾರ್ಯಕರ್ತರು ಬಹಳಷ್ಟು ಪ್ರಾಮಾಣಿಕರು ಎಂದು ದಾಳಿ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್ ಹೇಳಿದರು.

ಪಕ್ಷದ ಕಚೇರಿ ಮೇಲೆ ನಡೆದಿದೆಯೆನ್ನಲಾದ ಪೊಲೀಸ್ ದಾಳಿ ಕುರಿತು ಗುಜರಾತ್ ಪೊಲೀಸರು  ಇಲ್ಲಿಯ ತನಕ ಪ್ರತಿಕ್ರಿಯಿಸಿಲ್ಲ.

ದಾಳಿ ಕುರಿತು ಟ್ವೀಟ್ ಮಾಡಿದ ಕೇಜ್ರಿವಾಲ್ "ಗುಜರಾತ್ ಜನರಿಂದ ಆಪ್‍ಗೆ ದೊರಕುತ್ತಿರುವ ಬೆಂಬಲವು ಬಿಜೆಪಿಯ ನಿದ್ದೆಗೆಡಿಸಿದೆ. ಗುಜರಾತ್‍ನಲ್ಲಿ ಆಪ್ ಪರವಾದ ಬಿರುಗಾಳಿಯಿದೆ, ದಿಲ್ಲಿ ನಂತರ ಗುಜರಾತ್‍ನಲ್ಲೂ ದಾಳಿಗಳು ಆರಂಭಗೊಂಡಿವೆ. ದಿಲ್ಲಿಯಲ್ಲಿ ಏನೂ ದೊರಕಿಲ್ಲ, ಗುಜರಾತ್‍ನಲ್ಲೂ ಏನೂ ದೊರಕುವುದಿಲ್ಲ. ನಮ್ಮ ಜನರು ಬಹಳಷ್ಟು ಪ್ರಾಮಾಣಿಕರು ಹಾಗೂ ದೇಶಭಕ್ತರು" ಎಂದು ಬರೆದಿದ್ದಾರೆ.

ಆಪ್‍ನ ಅಹ್ಮದಾಬಾದ್ ಕಚೇರಿಯಲ್ಲಿ ಪೊಲೀಸರು ಸುಮಾರು ಎರಡು ಗಂಟೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆಂದು  ಗುಜರಾತ್‍ನ ಆಪ್ ನಾಯಕ ಇಸುದನ್ ಗಧ್ವಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News