ಶೌಚಗುಂಡಿಯ ವಿಷಾನಿಲ ಉಸಿರಾಡಿ ಇಬ್ಬರು ಮೃತಪಟ್ಟ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ ದಿಲ್ಲಿ ಹೈಕೋರ್ಟ್

Update: 2022-09-12 07:00 GMT
ಸಾಂದರ್ಭಿಕ ಚಿತ್ರ

‌ಹೊಸದಿಲ್ಲಿ: ಕಳೆದ ವಾರ ನಗರದ ಮುಂಡ್ಕಾ ಪ್ರದೇಶದಲ್ಲಿ ಚರಂಡಿಯೊಳಗೆ ವಿಷಕಾರಿ ಅನಿಲವನ್ನು ಉಸಿರಾಡಿದ ಕಾರಣದಿಂದ ಶೌಚಗುಂಡಿ(Manhole) ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂಬ ಪತ್ರಿಕಾ ವರದಿಯ(News report) ಅನುಸಾರ ದಿಲ್ಲಿ ಹೈಕೋರ್ಟ್(Delhi Highcourt) ಸೋಮವಾರ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ ಎಂದು livelaw ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (MCD), ದಿಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದಿಲ್ಲಿ ಜಲ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

ಈ ವಿಚಾರದಲ್ಲಿ ನ್ಯಾಯಪೀಠಕ್ಕೆ ಸಹಾಯ ಮಾಡಲು ಹಿರಿಯ ವಕೀಲ ರಾಜಶೇಖರ್ ರಾವ್(Rajshekhar Rao) ಅವರನ್ನು ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯ ನೇಮಿಸಿದೆ.

ಪಿಟಿಐ ವರದಿಯ ಪ್ರಕಾರ, ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಫ್ಲಾಟ್‌ಗಳಲ್ಲಿ ಕಸ ಗುಡಿಸುವ  ಕೆಲಸ ಮಾಡುತ್ತಿದ್ದ ರೋಹಿತ್ ಚಾಂಡಿಲಿಯಾ(Lohit Chandilia) ಮತ್ತು ಭದ್ರತಾ ಸಿಬ್ಬಂದಿಯಾಗಿದ್ದ ಅಶೋಕ್ ಕುಮಾರ್(Ashok Kumar) ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳಾಗಿದ್ದಾರೆ.

ಚರಂಡಿಯೊಳಗೆ ಮೊದಲು ಹೋದ ಚಾಂಡಿಲಿಯಾ ಒಳಗಿದ್ದ ವಿಷಕಾರಿ ಅನಿಲವನ್ನು ಉಸಿರಾಡಿದ ಬಳಿಕ ಪ್ರಜ್ಞಾಹೀನನಾಗಿ ಬಿದ್ದಿದ್ದ. ನಂತರ, ಕುಮಾರ್ ಚಾಂಡಿಲಿಯಾನನ್ನು ರಕ್ಷಿಸಲು ಚರಂಡಿಯೊಳಗೆ ಹೋಗಿದ್ದು, ಅಲ್ಲಿ ಅವರು ಕೂಡಾ ಪ್ರಜ್ಞೆ ಕಳೆದುಕೊಂಡರು ಎಂದು ವರದಿಗಳು ತಿಳಿಸಿವೆ. ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಸರ್ಕಾರದ ವಿವಿಧ ಉಪಕ್ರಮಗಳಿಂದಾಗಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಾಗ ಸಂಭವಿಸುವ ದುರಂತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News