ಎನ್‍ಸಿಪಿ ರಾಷ್ಟ್ರೀಯ ಅಧಿವೇಶನದಲ್ಲಿ ಭಾಷಣ ಮಾಡದೆಯೇ ಹೊರನಡೆದ ಅಜಿತ್ ಪವಾರ್

Update: 2022-09-12 07:47 GMT

ಹೊಸದಿಲ್ಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ) ಇದರ ರಾಷ್ಟ್ರೀಯ ಅಧಿವೇಶನ ರವಿವಾರ ನಡೆದ ವೇಳೆ  ಅಲ್ಲಿ ಭಾಷಣ ನೀಡದೆಯೇ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಅವರು ಪಕ್ಷದ ಮುಖ್ಯಸ್ಥ ಶರದ್ ಪವಾರ್(Sharad Pawar) ಮತ್ತಿತರ ಎದುರಿನಲ್ಲಿಯೇ ಸಭೆಯಿಂದ ಅರ್ಧದಲ್ಲಿಯೇ ಹೊರನಡೆದ ಘಟನೆ ನಡೆದಿದೆ.

ಅಜಿತ್ ಪವಾರ್ ಅವರಿಗಿಂತ ಮುಂಚಿತವಾಗಿ ಇನ್ನೊಬ್ಬ ನಾಯಕ ಜಯಂತ್ ಪಾಟೀಲ್(Jayant Patil) ಅವರಿಗೆ ಮಾತನಾಡಲು ಅವಕಾಶ ನೀಡಿದ ಕೆಲವೇ ಕ್ಷಣಗಳಲ್ಲಿ ವೇದಿಕೆಯಿಂದ ಅಜಿತ್ ಪವಾರ್ ಹೊರನಡೆದಿದ್ದಾರೆ. ಈ ಬೆಳವಣಿಗೆ ಪಕ್ಷದೊಳಗೆ ಮೂಡುತ್ತಿರುವ ಒಡಕಿನ ಸ್ಪಷ್ಟ ಸಂಕೇತವೆಂದೇ ತಿಳಿಯಲಾಗಿದೆ.

ಸಭೆಯಲ್ಲಿ ಮುಕ್ತಾಯ ಭಾಷಣವನ್ನು ಶರದ್ ಪವಾರ್ ಮಾಡುವುದಕ್ಕಿಂತ ಮುಂಚೆ ಅಜಿತ್ ಪವಾರ್ ಮಾತನಾಡಲಿದ್ದಾರೆ ಎಂದು ಎನ್‍ಸಿಪಿ ಸಂಸದ ಪ್ರಫುಲ್ ಪಟೇಲ್ ಘೋಷಿಸಿದರೂ ಅದಾಗಲೇ ಅಜಿತ್ ಪವಾರ್ ತಮ್ಮ ಸ್ಥಾನದಲ್ಲಿರಲಿಲ್ಲ.

ನಂತರ ಪ್ರಫುಲ್ ಪಟೇಲ್ ಅವರು ಮಾತನಾಡಿ ಅಜಿತ್ ಪವಾರ್ ಅವರು ವಾಶ್‍ರೂಂಗೆ ತೆರಳಿದ್ದಾರೆ ಹಾಗೂ ತಮ್ಮ ಭಾಷಣ ನೀಡಲು ವಾಪಸಾಗಲಿದ್ಧಾರೆ ಎಂದು ಹೇಳಿದರೂ ಪವಾರ್ ಬೆಂಬಲಿಗರ ಘೋಷಣೆ ಮುಂದುವರಿದಿತ್ತು. ವೇದಿಕೆಗೆ ತೆರಳಿ ಭಾಷಣ ನೀಡುವಂತೆ ಅಜಿತ್ ಪವಾರ್ ಅವರ ಮನವೊಲಿಕೆಗೆ ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ ಯತ್ನಿಸಿದ್ದೂ ಕಂಡು ಬಂತು.

ನಂತರ ಅಜಿತ್ ಪವಾರ್ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದರೂ ಅದಾಗಲೇ ಶರದ್ ಪವಾರ್ ತಮ್ಮ ಮುಕ್ತಾಯ ಭಾಷಣ ಆರಂಭಿಸಿದ್ದರಿಂದ ಅಜಿತ್ ಪವಾರ್ ಅವರಿಗೆ ಮಾತನಾಡುವ ಅವಕಾಶ ದೊರಕಿರಲಿಲ್ಲ. ತಮ್ಮ ನಡೆಯ ಬಗ್ಗೆ ನಂತರ ಸ್ಪಷ್ಟೀಕರಣ ನೀಡಿದ ಅಜಿತ್ ಪವಾರ್, ಇದು ರಾಷ್ಟ್ರೀಯ ಮಟ್ಟದ ಸಭೆಯಾಗಿದ್ದರಿಂದ ತಾವು ಭಾಷಣ ನೀಡಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News