ಹಿಂದುಗಳ ದಾವೆ ಸಮರ್ಥನೀಯ,‌ ಮುಂದಿನ ವಿಚಾರಣೆ ನಡೆಸಬಹುದು: ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪು

Update: 2022-09-12 14:25 GMT

ವಾರಣಾಸಿ(ಉ.ಪ್ರ).ಸೆ.12: ಇಲ್ಲಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಹಿಂದು ದೇವತೆಗಳ ಕುರುಹು ಇರುವುದರಿಂದ ಪೂಜೆ ಸಲ್ಲಿಸಲು ತಮಗೆ ಅವಕಾಶ ದೊರೆಯಬೇಕು ಎಂದು ಕೋರಿಕೊಂಡು ಹಿಂದುಗಳು ದಾಖಲಿಸಿರುವ ಸಿವಿಲ್ ದಾವೆಯು ಸಮರ್ಥನೀಯವಾಗಿದೆ ಮತ್ತು ಮುಂದಿನ ವಿಚಾರಣೆಯನ್ನು ನಡೆಸಬಹುದಾಗಿದೆ ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ಸೋಮವಾರ ಪ್ರಕಟಿಸಿದೆ. ಅದು ಸೆ.22ರಂದು ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿಯ ಚಿತ್ರವಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ಐವರು ಹಿಂದು ಮಹಿಳೆಯರು ಅಲ್ಲಿ ನಿತ್ಯ ಪೂಜೆ ಸಲ್ಲಿಸಲು ತಮಗೆ ಅನುಮತಿಯನ್ನು ನೀಡಬೇಕು ಎಂದು ಕೋರಿದ್ದಾರೆ. ಸಿವಿಲ್ ದಾವೆಯ ಸಮರ್ಥನೀಯತೆಯನ್ನು ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ್ದ ಅರ್ಜಿಯ ಕುರಿತು ತನ್ನ ಆದೇಶವನ್ನು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಆ.24ರಂದು ಕಾಯ್ದಿರಿಸಿದ್ದರು.

ಸಮಿತಿಯು ನಾಗರಿಕ ಪ್ರಕ್ರಿಯಾ ಸಂಹಿತೆಯ ಆದೇಶ 7 ನಿಯಮ 11ರಡಿ ಅರ್ಜಿಯನ್ನು ಸಲ್ಲಿಸಿತ್ತು. ಈ ಆದೇಶದಂತೆ ಅರ್ಜಿಯು ಕ್ರಮದ ಕಾರಣವನ್ನು ತೋರಿಸದಿದ್ದರೆ ಅಥವಾ ಕಾನೂನಿನಿಂದ ನಿಷೇಧಿಸಲ್ಪಟ್ಟಿದ್ದರೆ ಅದನ್ನು ವಜಾಗೊಳಿಸಬಹುದು. ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ತಾವು ಉಚ್ಚ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಮಸೀದಿ ಸಮಿತಿಯ ಪರ ವಕೀಲ ಇಖ್ಲಾಕ್ ಅಹ್ಮದ್ ಅವರು ತಿಳಿಸಿದರೆ,ಪ್ರಕರಣವು ನ್ಯಾಯಾಲಯದಲ್ಲಿ ಮುಂದುವರಿಯುತ್ತದೆ ಮತ್ತು ಲಭ್ಯವಿರುವ ಎಲ್ಲ ನ್ಯಾಯಾಂಗ ಮಾರ್ಗಗಳನ್ನು ತಾವು ಬಳಸುವುದಾಗಿ ಮಸೀದಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಯಾಸೀನ್ ಹೇಳಿದರು.

ಸೋಮವಾರ ನ್ಯಾಯಾಲಯದ ತೀರ್ಪು ಪ್ರಕಟಗೊಳ್ಳುವ ಮುನ್ನ ವಾರಣಾಸಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು ಮತ್ತು ಬಿಗುಭದ್ರತೆಯನ್ನು ಏರ್ಪಡಿಸಲಾಗಿತ್ತು.

ಮಸೀದಿಯ ಪಕ್ಕದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದ ಹೊರಗೆ ಭದ್ರತಾ ಸಿಬ್ಬಂದಿಗಳು ಕಾವಲು ನಿಂತಿದ್ದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು 2,000ಕ್ಕೂ ಅಧಿಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಾರಣಾಸಿ ಉಪ ವಿಭಾಗಾಧಿಕಾರಿ ಸಂತೋಷ ಕುಮಾರ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.

ಧಾರ್ಮಿಕ ಸ್ಥಳಗಳ ಯಥಾಸ್ಥಿತಿಯಲ್ಲಿ ಬದಲಾವಣೆಯನ್ನು ನಿಷೇಧಿಸಿರುವ 1991ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯನ್ನು ಹಿಂದು ಕಕ್ಷಿದಾರರು ಸಲ್ಲಿಸಿರುವ ಅರ್ಜಿಯು ಉಲ್ಲಂಘಿಸುವುದರಿಂದ ಅದು ಸಮರ್ಥನೀಯವಲ್ಲ ಎಂದು ಮಸೀದಿ ಸಮಿತಿಯು ನ್ಯಾಯಾಲಯದಲ್ಲಿ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News