ದಲಿತರ ಬದುಕಿನ ಮೇಲೆ ಆರ್ಥಿಕತೆಯ ಸವಾಲು

Update: 2022-09-13 07:29 GMT

ಸಾಮಾಜಿಕ ಅಸಮಾನತೆ, ಅಸ್ಪಶ್ಯತೆ ಮತ್ತು ಅನಕ್ಷರತೆಯ ಸಂಕಟಗಳಿಂದ ಆರ್ಥಿಕವಾಗಿಯೂ ಹಿಂದುಳಿದು ಕಡು ಬಡತನದಿಂದ ನಲುಗಿರುವ ದಲಿತ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶವಿರಿಸಿಕೊಂಡು ರೂಪಿಸಲಾದ ಮೀಸಲಾತಿ ಸವಲತ್ತನ್ನು ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿರುವ ಇಂದಿಗೂ ಸರಕಾರಗಳು ಮುಂದುವರಿಸಿಕೊಂಡು ಬಂದಿವೆ. ಅಸ್ಪಶ್ಯತೆಯ ಕರಾಳ ಬದುಕಿನಿಂದ ತತ್ತರಿಸಿ ಕನಿಷ್ಠ ಮೀಸಲಾತಿ ಸವಲತ್ತಿನಿಂದಾದರೂ ಕೊಂಚ ಸುಧಾರಣೆಗೊಳ್ಳುವತ್ತ ಹೆಜ್ಜೆ ಇಡುತ್ತಿದ್ದ ತಳಸಮುದಾಯದವರ ವಿರುದ್ಧ ವಿಭಿನ್ನ ಅನಿಸಿಕೆ, ಅಭಿಪ್ರಾಯಗಳು, ಅಸಹನೆ ಮತ್ತು ಅಸೂಯೆಗಳು ಸದಾ ಕಾಲ ನಮ್ಮ ನಡುವೆ ಜೀವಂತವಾಗಿವೆ.

ಸ್ವಾತಂತ್ರೋತ್ತರ ಭಾರತದಲ್ಲಿ ತಳ ಸಮುದಾಯಗಳ ಪ್ರಗತಿಗಾಗಿ ಸರಕಾರಗಳು ರೂಪಿಸಿದ ಮೀಸಲಾತಿ ಸವಲತ್ತು ಸಮರ್ಪಕವಾಗಿ ಆಯಾ ಕಾಲಘಟ್ಟಗಳಲ್ಲಿ ಪ್ರಾಮಾಣಿಕವಾಗಿ ಮತ್ತು ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದರೆ ಇಷ್ಟೊತ್ತಿಗೆ ದಲಿತ ಸಮುದಾಯ ಆರ್ಥಿಕವಾಗಿ ಉನ್ನತಿ ಸಾಧಿಸಬಹುದಿತ್ತು. ಆದರೆ, ಕಾಲಮಿತಿಯೊಳಗೆ ಸಮುದಾಯವನ್ನು ಸಬಲೀಕರಣಗೊಳಿಸುವ ಇಚ್ಛಾಶಕ್ತಿ ಇಲ್ಲದ ರಾಜಕಾರಣಿ ಮತ್ತು ಅಧಿಕಾರಶಾಹಿಗಳು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ರೂಪಿಸಿ ಒದಗಿಸಲಾಗುತ್ತಿದೆ ಎಂಬ ಕೇವಲ ಬಾಯುಪಚಾರದ ಮಾತುಗಳಿಂದ ಓಲೈಸಿ, ಮೂಗಿಗೆ ತುಪ್ಪಸವರಿದಂತೆ ಯೋಜನೆಗಳನ್ನು ರೂಪಿಸಿದ ಪರಿಣಾಮವಾಗಿ ಆ ಸಮುದಾಯ ಆರ್ಥಿಕ ಸಬಲೀಕರಣಗೊಳ್ಳಲು ಸಾಧ್ಯವಾಗದೆ ಇಂದಿಗೂ ಸರಕಾರಗಳ ಯೋಜನೆಗಳತ್ತಲೇ ಆಸೆಗಣ್ಣಿನಿಂದ ನೋಡುವಂತಹ ಸ್ಥಿತಿಯನ್ನು ನಿರ್ಮಿಸಿಕೊಂಡಿರುವುದು ನಿಜಕ್ಕೂ ಈ ದೇಶದ ದುರಂತವೆನ್ನಬೇಕಾಗಿದೆ. ಇನ್ನು, ನೂರಾರು ವರ್ಷಗಳಿಂದ ದಲಿತ ಸಮುದಾಯದಲ್ಲಿ ತಾಂಡವವಾಡುತ್ತಿರುವ ಬಡತನ, ಸಾಂಪ್ರದಾಯಿಕ ಮೌಢ್ಯತೆ, ಅನಕ್ಷರತೆ ಮತ್ತು ವ್ಯಾವಹಾರಿಕ ಅಜ್ಞಾನಗಳು ಈ ಸಮುದಾಯದಲ್ಲಿ ಆರ್ಥಿಕ ಚೇತರಿಕೆಯನ್ನು ತರುವಲ್ಲಿ ವಿಫಲಗೊಂಡಿರುವುದೂ ಕಾರಣ ಎನ್ನಲು ಅಡ್ಡಿಯಿಲ್ಲ.

ಜಾತೀಯತೆಯನ್ನೇ ಮೈಗೂಡಿಸಿಕೊಂಡು ಮುನ್ನಡೆದಿರುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸುವಂತಹ ಆತ್ಮಸ್ಥೈರ್ಯವನ್ನಾಗಲೀ, ಮಾನಸಿಕ ಗಟ್ಟಿತನವನ್ನಾಗಲೀ ಹೊಂದಿಲ್ಲದ ಕಾರಣ ವ್ಯಾಪಾರ, ವ್ಯವಹಾರ, ವಾಣಿಜ್ಯೋದ್ಯಮ ಚಟುವಟಿಕೆ, ಕೈಗಾರಿಕೆ ಮತ್ತು ವ್ಯಾವಹಾರಿಕ ಕುಶಲತೆಯಲ್ಲಿ ನೈಪುಣ್ಯತೆ ಹೊಂದಲು ಸಾಧ್ಯವಾಗದ್ದರಿಂದ ಈ ಸಮುದಾಯದ ಆರ್ಥಿಕೋನ್ನತಿ ಎಂಬುದು ಮರೀಚಿಕೆಯಾಗಿದೆ. ತಳಸಮುದಾಯದ ವಿದ್ಯಾವಂತ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಪ್ರಗತಿ ಹೊಂದಲು ವಿವಿಧ ಸರಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ (ಸಬ್ಸಿಡಿ) ಒದಗಿಸುವ ಯೋಜನೆ ಇದ್ದಾಗ್ಯೂ ಅಭಿವೃದ್ಧಿ ನಿಗಮ ಮತ್ತು ಬ್ಯಾಂಕಿನ ಷರತ್ತುಗಳನ್ನು ಪೂರೈಸಿ, ಸಾಲ ಸಹಾಯಧನ ಪಡೆಯುವ ಹೊತ್ತಿಗೆ ಅರ್ಜಿದಾರರ ಅರ್ಧ ಆಯುಷ್ಯ ಮುಗಿದಿರುತ್ತದೆ. ಜಾತೀಯತೆಯ ಪೂರ್ವಾಗ್ರಹವುಳ್ಳ ಅಧಿಕಾರಿಶಾಹಿಗಳು ತೋರುವ ನಿರಾಸಕ್ತಿ, ಉಡಾಫೆ ಧೋರಣೆಗಳು, ಸರಕಾರದಿಂದ ಸಕಾಲದಲ್ಲಿ ಬಿಡುಗಡೆಯಾಗದ ಅನುದಾನ, ಸ್ವಯಂ ಉದ್ಯೋಗಕ್ಕೆ ಸ್ಥಳಾವಕಾಶದ ಕೊರತೆ ಅಥವಾ ಪರವಾನಿಗೆ ದೊರಕಿಸಿಕೊಡುವಲ್ಲಿ ಸಂಬಂಧಿಸಿದ ಅಧಿಕಾರಿಗಳ ಅಸಹಕಾರ, ಸ್ಥಳೀಯ ಶಾಸಕರ ಅಧ್ಯಕ್ಷತೆಯ ಸಮಿತಿಗಳ (ರಾಜಕೀಯ) ಕಾರ್ಯನಿರ್ವಹಣೆ ಹೀಗೆ, ಹತ್ತಾರು ಕಾರಣಗಳ ನೆಪದಲ್ಲಿ ಅರ್ಹ ಫಲಾಪೇಕ್ಷಿಗಳಿಗೆ ನೆರವು ಸಿಗದೆ ಉದ್ದೇಶಿತ ಸ್ವಯಂ ಉದ್ಯೋಗ ಕೈಗೊಳ್ಳುವ ಅಭಿಲಾಷೆಯನ್ನೇ ಮರೆಯುವಂತಾಗಿರುವುದು ವಾಸ್ತವ ಸತ್ಯ.

ಈ ಬಗೆಯ ವಸ್ತುಸ್ಥಿತಿ ಒಂದೆಡೆಯಾದರೆ, ಸ್ವಯಂ ಬಂಡವಾಳದ ಕೊರತೆಯೇ ಪ್ರಧಾನವಾಗಿರುವ ಸಂದರ್ಭದಲ್ಲಿ ಜಾತೀಯತೆಯ ಸಮಾಜದಲ್ಲಿ ಕಿರಾಣಿ ಅಂಗಡಿ, ಹೊಟೇಲ್ ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಮ್ಮೆದುರು ದಟ್ಟವಾಗಿರುವಾಗ ವ್ಯಾಪಾರ ವ್ಯವಹಾರಗಳ ಮೂಲಕ ದಲಿತ ಸಮಾಜ ಆರ್ಥಿಕವಾಗಿ ಸದೃಢವಾಗಲು ಸಾಧ್ಯವೇ? ವ್ಯಾಪಾರ ವಹಿವಾಟುಗಳ ಮೂಲಕ ಆರ್ಥಿಕತೆಯನ್ನು ಸಾಧಿಸಲು ವಿಫಲವಾಗಿರುವ ದಲಿತ ಸಮುದಾಯ, ಮನೆ ನಿರ್ಮಾಣ, ನಿವೇಶನ ಖರೀದಿ, ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆ ಮುಂತಾದ ಹೊಣೆಗಾರಿಕೆಗಳನ್ನು ನಿರ್ವಹಿಸುವ ಸಲುವಾಗಿ ಸರಳ ಮತ್ತು ಸುಲಭವಾದ ಹಣಕಾಸಿನ ಭದ್ರತೆಯ ಮಾರ್ಗವೆಂದುಕೊಂಡು ತಾವೇ ಚೀಟಿ ವ್ಯವಹಾರಗಳನ್ನು ನಡೆಸುವ ಅಥವಾ ಚೀಟಿ ವ್ಯವಹಾರವನ್ನು ನಡೆಸುವವರೊಂದಿಗೆ ಸೇರಿ ತಮ್ಮ ಮಾಸಿಕ ವಂತಿಗೆಯನ್ನು ಠೇವಣಿಯ ರೂಪದಲ್ಲಿ ಇರಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು, ಅಲ್ಲಿಯೂ ನಷ್ಟದ ಪ್ರಮಾಣವೇ ಹೆಚ್ಚಾಗಿ ಭ್ರಮನಿರಸನಗೊಳಿಸುವುದನ್ನು ವ್ಯಾಪಕವಾಗಿ ಕಾಣುತ್ತಿದ್ದೇವೆ. ಈ ಚೀಟಿ ವ್ಯವಹಾರಗಳಲ್ಲಿ ಸಂಭವಿಸುವ ನಷ್ಟವು ಕೌಟುಂಬಿಕ, ಸಾಮಾಜಿಕ ಮತ್ತು ಬಂಧು-ಬಾಂಧವರ ನಡುವೆ ಕಲಹ ಮತ್ತು ದ್ವೇಷಕ್ಕೆ ಕಾರಣವಾಗಿ ಪರಿಸ್ಥಿತಿ ಕೈಮೀರಿ ಹಣ ಮರುಪಾವತಿಸಲು ವಿಫಲರಾಗಿ ತಲೆ ಮರೆಸಿಕೊಂಡು ಊರು ತೊರೆದು ಬಿಡುವ, ಇಲ್ಲವೇ, ಹತಾಶರಾಗಿ ಆತ್ಮಹತ್ಯೆಯ ಹಾದಿ ಹಿಡಿಯುವ ಹಂತಕ್ಕೆ ತಲುಪಿಸುತ್ತಿರುವ ಈ ಚೀಟಿ ವ್ಯವಹಾರಗಳು ದಲಿತ ಸಮಾಜವನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಯಶಸ್ವಿಯಾಗುತ್ತಿಲ್ಲವೆಂಬ ಅಭಿಪ್ರಾಯ ವ್ಯಾಪಕವಾಗಿರುವುದು ಸತ್ಯ.

 
   
ವೈಯಕ್ತಿಕ ಹಾಗೂ ಕುಟುಂಬಗಳ ತಾಪತ್ರಯಗಳು, ಜೀವನ ನಿರ್ವಹಣೆ, ವೈದ್ಯಕೀಯ ಕಾರಣ ಇತ್ಯಾದಿ ತುರ್ತು ಕಾರಣಗಳಿಗಾಗಿ ಸಿಕ್ಕಲ್ಲಿ ಸಾಲ ಮಾಡುವ ಕುಟುಂಬಗಳು ಹೆಚ್ಚಿನ ಬಡ್ಡಿ ಪಾವತಿಸಲಾಗದೆ ಪರಿತಪಿಸುವ ಸನ್ನಿವೇಶಗಳು ದಲಿತ ಸಮಾಜವನ್ನು ಮತ್ತಷ್ಟು ಆರ್ಥಿಕ ದಿವಾಳಿತನದತ್ತ ಕರೆದೊಯ್ದಿದೆ. ಅಲ್ಲಿಯೂ ವ್ಯಾವಹಾರಿಕ ಚತುರತೆ ಇಲ್ಲದೆ ಮುಗ್ಗರಿಸಿಬಿಡುತ್ತಿರುವ ದುರಂತಗಳು ನಮ್ಮೆದುರು ನಿಂತಿವೆ. ಸಾಂಸಾರಿಕ ಸಂಕಷ್ಟಗಳಿಂದಾಗಿ ತಮ್ಮ ಬಳಿ ಇದ್ದ ಚಿನ್ನ-ಬೆಳ್ಳಿ ಆಭರಣಗಳನ್ನು ಗಿರವಿ ಇಟ್ಟು ನಂತರ ಅವುಗಳನ್ನು ಸಕಾಲದಲ್ಲಿ ಬಿಡಿಸಿಕೊಳ್ಳಲಾಗದೆ ಹರಾಜು ಸನ್ನಿವೇಶಕ್ಕೆ ಅವಕಾಶವಾಗಿರುವ ಸನ್ನಿವೇಶಗಳಿರುವುದು ಕೂಡಾ ವಾಸ್ತವ. ಸಾಂಪ್ರದಾಯಿಕ ಸಂಕೋಲೆಯಲ್ಲಿ ಬಂದಿಯಾಗಿರುವ ಈ ಸಮುದಾಯದಲ್ಲಿ ಬರುವ ಎಲ್ಲ ತರಹದ ತಾಪತ್ರಯಗಳಿಗೆ ಭಯಪಟ್ಟು ಶಾಂತಿ, ಹರಕೆಯ ನೆಪದಿಂದ ಮತ್ತೆ ಮತ್ತೆ ಸಾಲದ ಹೊಂಡಕ್ಕೆ ಬೀಳುವ ದುರಂತಗಳು ಅನೇಕ ವೇಳೆ ಈ ಸಮುದಾಯದ ಆರ್ಥಿಕ ದುರಂತಕ್ಕೆ ಮುನ್ನುಡಿ ಬರೆದಿರುವುದನ್ನು ಕೂಡಾ ಮರೆಯುವಂತಿಲ್ಲ. ಒಟ್ಟಾರೆ, ವ್ಯವಸ್ಥೆಯ ಕೈಗೊಂಬೆಯಾಗಿರುವ ಈ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸಿ ಸ್ವಾವಲಂಬಿಗಳನ್ನಾಗಿಸಲು ಪ್ರಾಮಾಣಿಕ ಚಿಂತನೆ, ಪ್ರಯತ್ನ ಮತ್ತು ಮಾರ್ಗದರ್ಶನದ ಅವಶ್ಯಕತೆ ಬಹು ಮುಖ್ಯವಾಗಿದೆ. ಬಗ್ಗೆ ಈ ಹೊಣೆಗಾರಿಕೆಯನ್ನು ನಿರ್ವಹಿಸುವವರಾರು ಎಂಬುದೇ ನಮ್ಮೆದುರಿನ ಬಹು ದೊಡ್ಡ ಸವಾಲು

Writer - ಗೌಡಗೆರೆ ಮಾಯುಶ್ರೀ

contributor

Editor - ಗೌಡಗೆರೆ ಮಾಯುಶ್ರೀ

contributor

Similar News