ಹರಿದ್ವಾರ ಧರ್ಮ ಸಂಸದ್ ದ್ವೇಷದ ಭಾಷಣ ಪ್ರಕರಣ: ಆರೋಪಿ ಜಿತೇಂದ್ರ ತ್ಯಾಗಿಗೆ ಸುಪ್ರೀಂಕೋರ್ಟಿನಿಂದ ಜಾಮೀನು

Update: 2022-09-13 07:17 GMT

ಹೊಸದಿಲ್ಲಿ: ಕಳೆದ ವರ್ಷ ಹರಿದ್ವಾರದಲ್ಲಿ(Haridwar) ನಡೆದ ಧರ್ಮ ಸಂಸದ್‍ನಲ್ಲಿ(Dharm sansad) ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ನೀಡಲಾದ ಪ್ರಚೋದನಾತ್ಮಕ ಭಾಷಣಗಳಿಗೆ(Hatespeech) ಸಂಬಂಧಿಸಿದ ಪ್ರಕರಣದ ಆರೋಪಿಯಾಗಿರುವ ಜಿತೇಂದ್ರ ನಾರಾಯಣ್ ತ್ಯಾಗಿ ಎಂಬಾತನಿಗೆ ಸುಪ್ರೀಂ ಕೋರ್ಟ್(supreme court) ಸೋಮವಾರ ಜಾಮೀನು ಮಂಜೂರುಗೊಳಿಸಿದೆ.

ಈ ರೀತಿಯ ಕೃತ್ಯಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಇನ್ನು ಮುಂದೆ ಮಾಡುವುದಿಲ್ಲ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಚಾರ ಪ್ರಕಟಿಸುವುದಿಲ್ಲ ಎಂಬ ಲಿಖಿತ ಭರವಸೆಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆರೋಪಿ, ಈ ಹಿಂದೆ ವಝೀಂ ರಿಝ್ವಿ ಆಗಿದ್ದ ತ್ಯಾಗಿಗೆ ಜಾಮೀನು ಮಂಜೂರುಗೊಳಿಸುವ ಸಂದರ್ಭ  ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿ ವಿ ನಾಗರತ್ನ ಅವರ ಪೀಠ ಹೇಳಿದೆ.

ಅರ್ಜಿದಾರನನ್ನು ಮೂರು ದಿನಗಳೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಹಾಗೂ ಆತ ಎಲ್ಲಾ ಷರತ್ತುಗಳಿಗೆ ಬದ್ಧನಾಗುವ ಬಗ್ಗೆ ಲಿಖಿತವಾಗಿ ಭರವಸೆ ನೀಡಿದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆಯಲ್ಲದೆ ಆತ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ  ಆತನ ಜಾಮೀನು ರದ್ದುಗೊಳಿಸಲು ಕೋರಿ ಅರ್ಜಿ ಸಲ್ಲಿಸಲು ಪ್ರತಿವಾದಿಗಳು/ಪ್ರಾಸಿಕ್ಯೂಶನ್ ಸ್ವತಂತ್ರರು, ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದಕ್ಕೂ ಮುಂಚೆ ಆಗಸ್ಟ್ 29ರಂದು ಸುಪ್ರೀಂ ಕೋರ್ಟ್ ಆರೋಪಿಯ ಮಧ್ಯಂತರ ಜಾಮೀನು ಅವಧಿಯನ್ನು ವೈದ್ಯಕೀಯ ಕಾರಣಗಳಿಗಾಗಿ ವಿಸ್ತರಿಸಲು ನಿರಾಕರಿಸಿತ್ತಲ್ಲದೆ ಆತನಿಗೆ ಶರಣಾಗುವಂತೆ ಸೂಚಿಸಿತ್ತು. ತ್ಯಾಗಿಗೆ ಈ ಹಿಂದೆ ಮೇ 17ರಂದು ಮೂರು ತಿಂಗಳ ಮಧ್ಯಂತರ ಜಾಮೀನನ್ನು ವೈದ್ಯಕೀಯ ಕಾರಣಗಳಿಗಾಗಿ ಒದಗಿಸಲಾಗಿತ್ತು.

ತ್ಯಾಗಿಯ ಜಾಮೀನು ಅರ್ಜಿಯನ್ನು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಉತ್ತರಾಖಂಡ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಆತ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ.

ಧರ್ಮ ಸಂಸದ್‍ನಲ್ಲಿ ಪ್ರಚೋದನಕಾರಿ ಭಾಷಣ ನೀಡಿದ್ದಕ್ಕಾಗಿ ಈ ವರ್ಷದ ಜನವರಿ 13 ರಂದು ಆತನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 153ಎ ಮತ್ತು 298 ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಶಿಯಾ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷನಾಗಿದ್ದ ತ್ಯಾಗಿ ಡಿಸೆಂಬರ್ 2021 ರಲ್ಲಿ ಹಿಂದು ಧರ್ಮಕ್ಕೆ ಮತಾಂತರಗೊಂಡು ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಆಗಿದ್ದ.

ಡಿಸೆಂಬರ್ 17 ರಿಂದ 19ರ ತನಕ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‍ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣ ಮಾಡಿದ  ಆರೋಪ ಹೊರಿಸಿ ಆತನ ವಿರುದ್ಧ  ಹರಿದ್ವಾರ್ ನಿವಾಸಿ ನದೀಂ ಆಲಿ ಎಂಬ ವ್ಯಕ್ತಿ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News