ನೂತನ ಸಂಸತ್ತಿಗೆ ಅಂಬೇಡ್ಕರ್ ಹೆಸರಿಡುವಂತೆ ಕೇಂದ್ರಕ್ಕೆ ಆಗ್ರಹ: ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

Update: 2022-09-13 16:15 GMT
photo: industhan times 

 ಹೈದರಾಬಾದ್,ಸೆ.13: ದಿಲ್ಲಿಯಲ್ಲಿನ ನೂತನ ಸಂಸತ್ ಕಟ್ಟಡಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನಿಡುವಂತೆ ಕೇಂದ್ರವನ್ನು ಆಗ್ರಹಿಸುವ ಮತ್ತು ಕೇಂದ್ರ ಸರಕಾರವು ಪ್ರಸ್ತಾಪಿಸಿರುವ ನೂತನ ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ವಿರೋಧಿಸುವ ಎರಡು ಪ್ರತ್ಯೇಕ ನಿರ್ಣಯಗಳನ್ನು ತೆಲಂಗಾಣ ವಿಧಾನಸಭೆಯು ಮಂಗಳವಾರ ಅಂಗೀಕರಿಸಿದೆ.

ಸದನದಲ್ಲಿ ನಿರ್ಣಯವನ್ನು ಮಂಡಿಸಿದ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಅವರು,ನೂತನವಾಗಿ ನಿರ್ಮಾಣಗೊಂಡಿರುವ ಸಂಸತ್ ಕಟ್ಟಡಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನಿಡುವುದು ಸೂಕ್ತವಾಗುತ್ತದೆ ಎಂದು ಹೇಳಿದರು.

ವಿದ್ಯುತ್ ಮಸೂದೆಯ ವಿರುದ್ಧ ನಿರ್ಣಯವನ್ನು ಮಂಡಿಸಿದ ವಿದ್ಯುತ್ ಸಚಿವ ಜಿ.ಜಗದೀಶ ರೆಡ್ಡಿಯವರು,ಮಸೂದೆಯು ರೈತರು, ಬಡವರ್ಗಗಳು ಮತ್ತು ವಿದ್ಯುತ್ ಕ್ಷೇತ್ರದ ಉದ್ಯೋಗಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು. ದಿಲ್ಲಿಯಲ್ಲಿನ ಸೆಂಟ್ರಲ್ ವಿಸ್ಟಾದ ಪುನರ್‌ಅಭಿವೃದ್ಧಿಯ ಅಂಗವಾಗಿ ನೂತನ ಸಂಸತ್ ಕಟ್ಟಡವು ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದೆ.

2020,ಡಿಸೆಂಬರ್‌ನಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ಕಟ್ಟಡದ ಚಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದರು.

2022ರ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನೂತನ ಕಟ್ಟಡದಲ್ಲಿ ನಡೆಸಲು ಕೇಂದ್ರವು ಉದ್ದೇಶಿಸಿದೆ.ವಿದ್ಯುತ್ ತಿದ್ದುಪಡಿ ಮಸೂದೆ 2022 ಒಂದು ಪ್ರದೇಶದಲ್ಲಿ ಬಹು ಸೇವಾ ಪೂರೈಕೆದಾರರ ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ಒದಗಿಸುವ ಮೂಲಕ ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿ ಪೈಪೋಟಿಯನ್ನು ಸೃಷ್ಟಿಸಲು ಬಯಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯು ಪರಿಗಣನೆಗಾಗಿ ಮತ್ತು ಅಂಗೀಕಾರಕ್ಕಾಗಿ ಮಂಡನೆಗೊಳ್ಳುವ ಸಾಧ್ಯತೆಯಿದೆ. ಆ.8ರಂದು ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಮಸೂದೆಯನ್ನು ಅದೇ ದಿನ ಶಕ್ತಿ ಇಂಧನ ಕುರಿತು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News