ಗುಜರಾತ್ ಪಾಲಾದ ಸೆಮಿಕಂಡಕ್ಟರ್ ಸ್ಥಾವರ: ಏಕನಾಥ ಶಿಂಧೆ ಸರಕಾರವನ್ನು ದೂಷಿಸಿದ ಆದಿತ್ಯ ಠಾಕ್ರೆ

Update: 2022-09-14 05:12 GMT
Photo: twitter

ಮುಂಬೈ: ಭಾರತದ ಮೊದಲ ಸೆಮಿಕಂಡಕ್ಟರ್ ಸ್ಥಾವರವನ್ನು ಗುಜರಾತ್ ಸರಕಾರ  1.54 ಲಕ್ಷ ಕೋಟಿ ರೂ.ಗೆ ಬಾಚಿಕೊಂಡ ನಂತರ ಶಿವಸೇನಾ ನಾಯಕ ಆದಿತ್ಯ ಠಾಕ್ರೆ(Aaditya Thackeray) ಮಹಾರಾಷ್ಟ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಣಿಗಾರಿಕೆ ಸಮೂಹ ವೇದಾಂತ ಹಾಗೂ  ತೈವಾನ್‌ನ ಎಲೆಕ್ಟ್ರಾನಿಕ್ಸ್ ತಯಾರಿಕಾ ದೈತ್ಯ ಫಾಕ್ಸ್‌ಕಾನ್ ಗುಜರಾತ್‌ನ ಅಹಮದಾಬಾದ್‌ನಲ್ಲಿ ಜಂಟಿಯಾಗಿ ಘಟಕವನ್ನು ನಿರ್ಮಿಸಲು ನಿರ್ಧರಿಸಿವೆ. ಸ್ಥಾವರ ಘಟಕವನ್ನು ತನ್ನದಾಗಿಸಿಕೊಳ್ಳಲು ನಡೆದ  ನಡೆದ ನಿಕಟ ಸ್ಪರ್ಧೆಯಲ್ಲಿ ಗುಜರಾತ್ ಮಹಾರಾಷ್ಟ್ರವನ್ನು ಸೋಲಿಸಿದೆ.

ಮಹಾರಾಷ್ಟ್ರದ ಹಿಂದಿನ ಮಹಾ ವಿಕಾಸ್ ಅಘಾಡಿ ಸರಕಾರವು ಈ ಯೋಜನೆಯನ್ನು ಗೆಲ್ಲಲು ಪ್ರಯತ್ನಿಸಿದೆ ಎಂದು ಆದಿತ್ಯ ಠಾಕ್ರೆ ಹೇಳಿದರು.

ಶಿವಸೇನೆ ನೇತೃತ್ವದ ಎಂವಿಎ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ ಆದಿತ್ಯ ಠಾಕ್ರೆ, "ಮಹಾರಾಷ್ಟ್ರದಲ್ಲಿ ಈ  ಸ್ಥಾವರವನ್ನು ಸ್ಥಾಪಿಸಲು ಬಹುತೇಕ ನಿರ್ಧರಿಸಲಾಗಿತ್ತು" ಎಂದು ಹೇಳಿದರು.

“ನಮ್ಮ ಎಂವಿಎ ಸರಕಾರ ಇದನ್ನು ಅಂತಿಮ ಹಂತಕ್ಕೆ ತಂದಿತ್ತು. ಈಗಿನ ಸರಕಾರವು  ಸಂಭಾವ್ಯ ಹೂಡಿಕೆದಾರರ ವಿಶ್ವಾಸವನ್ನು ಕಳೆದುಕೊಂಡಿದೆ. ಆದ್ದರಿಂದ ಅಂತಹ ಮೆಗಾ ಯೋಜನೆಗಳು ಇಲ್ಲಿಗೆ ಬರುತ್ತಿಲ್ಲ”ಎಂದು ಅವರು ಹೇಳಿದರು.

ಈ ಬೃಹತ್ ಯೋಜನೆಯು 160 ಸಹಾಯಕ ಕೈಗಾರಿಕೆಗಳನ್ನು ಬೆಂಬಲಿಸುತ್ತದೆ ಹಾಗೂ  ಮಹಾರಾಷ್ಟ್ರದಲ್ಲಿ 70,000 ರಿಂದ 1 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿತ್ತು ಎಂದು ಶಿವಸೇನಾ ನಾಯಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News