ಕೊಲ್ಕತ್ತಾ: ಬಿಜೆಪಿ ಪ್ರತಿಭಟನೆ ವೇಳೆ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚುವ ವೀಡಿಯೋ ವೈರಲ್

Update: 2022-09-14 08:37 GMT
Photo: Twitter/@srinivasiyc

ಕೊಲ್ಕತ್ತಾ: ಮಂಗಳವಾರ ಹಿಂಸಾತ್ಮಕ ರೂಪಕ್ಕೆ ತಿರುಗಿದ ಕೊಲ್ಕತ್ತಾದಲ್ಲಿ ನಡೆದ ಬಿಜೆಪಿ(BJP) ಪ್ರತಿಭಟನೆ ವೇಳೆ ಪೊಲೀಸ್ ವಾಹನವೊಂದಕ್ಕೆ(Kolkata Police Van) ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆನ್ನಲಾದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ವಾಹನಕ್ಕೆ ತನ್ನ ಕಾರ್ಯಕರ್ತರು ಬೆಂಕಿ ಹಚ್ಚಿಲ್ಲ ಎಂದು ಬಿಜೆಪಿ ಹೇಳಿದೆಯಾದರೂ ಘಟನೆಯ ವೀಡಿಯೋಗಳಲ್ಲಿ ಈ ವಾಹನವನ್ನು ಹೇಗೆ ಪುಡಿಗಟ್ಟಲಾಯಿತು ಹಾಗೂ ಕೇಸರಿ ಬಟ್ಟೆ ಧರಿಸಿದ ಒಬ್ಬ ವ್ಯಕ್ತಿ ವಾಹನದ ಹತ್ತಿರಕ್ಕೆ ಬಂದು ಅದಕ್ಕೆ ಬೆಂಕಿ ಹಚ್ಚಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ndtv.com ವರದಿ ಮಾಡಿದೆ.

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್(BS Srinivas) ಒಂದು ಕ್ಲೋಸ್-ಅಪ್ ವೀಡಿಯೋ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಕೇಸರಿ ಟಿ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಪೊಲೀಸ್ ವ್ಯಾನಿನ ಎದುರಿನ ಸೀಟಿನಲ್ಲಿ ಇರಿಸಲಾಗಿದ್ದ ಟವೆಲ್ ಒಂದಕ್ಕೆ ಸಿಗರೇಟ್ ಲೈಟರ್ ನಿಂದ ಬೆಂಕಿ ಹಚ್ಚುತ್ತಿರುವುದು ಕಾಣಿಸುತ್ತದೆ. "ಗುರುತಿಸಿ, ಯಾವ ಪಕ್ಷದ ರಾಷ್ಟ್ರೀಯವಾದಿ ಗಲಭೆಕೋರರು ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಜೀಪುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ?'' ಎಂದು ಪ್ರಶ್ನಿಸಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಶ್ರೀನಿವಾಸ್ ಅವರು ಇನ್ನೊಂದು ವೀಡಿಯೋ ಕೂಡ ಪೋಸ್ಟ್ ಮಾಡಿದ್ದು ಅದರಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದಿರುವ ಮಂದಿ ಪೊಲೀಸ್ ವಾಹನವೊಂದನ್ನು ಪುಡಿಗಟ್ಟುವುದು ಕಾಣಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯ ಹಿಂದಿನ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿದ ಶ್ರೀನಿವಾಸ್ "ಈ ಗಲಭೆಕೋರರನ್ನು ಅವರ ಬಟ್ಟೆಗಳು ಮತ್ತು ಧ್ವಜಗಳಿಂದ ಪ್ರಧಾನಿ ಗುರುತಿಸುತ್ತಾರೆ ಎಂಬ ಬಗ್ಗೆ ಖಾತರಿಯಿದೆ ಮತ್ತು ಅವರು ತಮ್ಮ ಹೃದಯದಲ್ಲಿ ಅವರನ್ನು ಯಾವತ್ತೂ ಕ್ಷಮಿಸಲು ಸಾಧ್ಯವಿಲ್ಲ,'' ಎಂದು ಬರೆದಿದ್ದಾರೆ.

ಆದರೆ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದು ತನ್ನ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಹೇಳಿದೆ. "ಪೊಲೀಸರೇ ಹೀಗೆ ಮಾಡಿರಬಹುದು, ನಮ್ಮ ಕಾರ್ಯಕರ್ತರ ಬಳಿ ಶಸ್ತ್ರಗಳಿರಲಿಲ್ಲ,. ಪ್ರಾಯಶಃ ತೃಣಮೂಲ ಕಾಂಗ್ರೆಸ್ ಜಿಹಾದಿಗಳು ಈ ಹಿಂಸೆ ನಡೆಸಿರಬಹುದು,'' ಎಂದು ವಿಪಕ್ಷ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಪೊಲೀಸರ ಪ್ರಚೋದನೆಯಿಂದಲೇ ಹಿಂಸೆ ಉಂಟಾಗಿತ್ತು ಎಂದೂ ಬಿಜೆಪಿ ಹೇಳಿದೆ.

ಪಶ್ಚಿಮ ಬಂಗಾಳದ ತೃಣಮೂಲ ಸರಕಾರದ 'ಭ್ರಷ್ಟಾಚಾರ'ವನ್ನು ಖಂಡಿಸಿ ಮಂಗಳವಾರ ನಡೆದ ಪ್ರತಿಭಟನೆ ಹೌರಾ ರೈಲ್ವೆ ನಿಲ್ದಾಣದ ಸಮೀಪ ಹಿಂಸಾರೂಪಕ್ಕೆ ತೆರಳಿದ ನಂತರ ಸುವೇಂದು ಅಧಿಕಾರಿ ಸಹಿತ ಹಲವು ನಾಯಕರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ದಿಗಂಬರ ಕಾಮತ್ ನೇತೃತ್ವದಲ್ಲಿ ಗೋವಾ ಕಾಂಗ್ರೆಸ್ ನ 8 ಶಾಸಕರು ಬಿಜೆಪಿಗೆ ಸೇರ್ಪಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News