ಮೋದಿ, ಯೋಗಿ ಟೀಕಿಸುವಂತಿರಲಿಲ್ಲ: 'ನ್ಯೂಸ್ ನೇಷನ್' ಸುದ್ದಿ ವಾಹಿನಿಗೆ ರಾಜೀನಾಮೆ ನೀಡಿದ ಪತ್ರಕರ್ತ

Update: 2022-09-14 13:03 GMT
ಅನಿಲ್ ಯಾದವ್ (Photo: bhadas4media.com) 

ಹೊಸದಿಲ್ಲಿ: ಲಕ್ನೋದಲ್ಲಿನ 'ನ್ಯೂಸ್ ನೇಷನ್' ಸುದ್ದಿ ವಾಹಿನಿಯಿಂದ ಇತ್ತೀಚೆಗೆ ರಾಜೀನಾಮೆ ನೀಡಿರುವ ಅನಿಲ್ ಯಾದವ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವೀಡಿಯೋವೊಂದರಲ್ಲಿ ನ್ಯೂಸ್ ನೇಷನ್ ಬಗ್ಗೆ ಹಲವು ಮಾಹಿತಿಗಳನ್ನು ಹೊರಗೆಡಹಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಸರಕಾರಗಳು ಅಥವಾ ಯಾವುದೇ ಬಿಜೆಪಿ ನಾಯಕನ ವಿರುದ್ಧ ಟೀಕಾತ್ಮಕ ಪದಗಳನ್ನು ವರದಿಗಾರರು ಪ್ರಯೋಗಿಸಬಾರದು ಎಂಬ ಸೂಚನೆಗಳನ್ನು 'ನ್ಯೂಸ್ ನೇಷನ್' ಪಡೆದಿದೆ ಎಂದು ಅವರು ಆರೋಪಿಸಿದ್ದಾರೆಂದು newslaundry.com ವರದಿ ಮಾಡಿದೆ. 

'ನ್ಯೂಸ್ ನೇಷನ್' ಸೇವೆಗೆ 2012ರಲ್ಲಿ ಸೇರಿದ್ದ ಹಾಗೂ ಇತ್ತೀಚೆಗೆ ರಾಜೀನಾಮೆ ನೀಡಿರುವ ಅನಿಲ್ ಯಾದವ್ "ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿ ಭೀತಿಯಿಂದ ಕೂಡಿದೆ, ನಾನು ನನ್ನನ್ನು ಪತ್ರಕರ್ತ ಎಂದು ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತೇನೆ. ನಾನೊಬ್ಬ ಸೇವಕನಾಗಿದ್ದೇನೆ,'' ಎಂದು ಹೇಳಿದ್ದಾರೆ.

"ನೀವು ಯಾವುದಾದರೂ ನಾಯಕ ಅಥವಾ ಅವರ ನೀತಿಯನ್ನು ಟೀಕಿಸಬೇಕೆಂದಿದ್ದರೆ ಅದಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇದ್ದಾರೆ,'' ಎಂದು ಅವರು ಹೇಳುತ್ತಾರೆ.

ಸಂಪಾದಕರನ್ನು 'ಚಂಪಾದಕರು' ಎಂದು ಅವರು ಬಣ್ಣಿಸಿದ್ದಾರಲ್ಲದೆ "ನ್ಯೂಸ್ ನೇಷನ್ ಪ್ರತಿ ವರ್ಷ ಬಿಜೆಪಿ ಸರಕಾರದ ಜಾಹೀರಾತುಗಳಿಂದ ರೂ. 17 ರಿಂದ ರೂ. 18 ಕೋಟಿ ಆದಾಯ ಗಳಿಸುತ್ತಿದೆ, ಇದೇ ಕಾರಣಕ್ಕೆ ನ್ಯೂಸ್ ನೇಷನ್ ಹಾಗೂ ಅದರ ಪ್ರಾದೇಶಿಕ ವಾಹಿನಿ ನ್ಯೂಸ್ ಸ್ಟೇಟ್ ಬಿಜೆಪಿ ವಿರುದ್ಧ ಏನೂ ಹೇಳುವಂತಿಲ್ಲ, ಟೀಕಿಸಿದ್ದೇ ಆದಲ್ಲಿ ಇಮೇಲ್ ದೊರೆಯುತ್ತದೆ ಅಥವಾ ನಮ್ಮ ಉದ್ಯೋಗಗಳು ಅಪಾಯದಲ್ಲಿರುತ್ತವೆ,'' ಎಂದು ಅವರು ಹೇಳಿದ್ದಾರೆ.

ನ್ಯೂಸ್ ನೇಷನ್‍ಗೆ 'ಹಿಂದು-ಮುಸ್ಲಿಂ ಅಜೆಂಡಾ ಇದೆ,' ಎಂದು ಯಾದವ್ ಹೇಳಿದ್ದಾರೆ. "ಸರಕಾರದಲ್ಲಿ ಹಗರಣವಿದೆ ಹಾಗೂ ಯಾವುದೇ ಸಚಿವರು ಏನಾದರೂ ಹೇಳಿದ್ದಾರೆಂದು ನಾವು ಹೇಳಿದರೆ ಆದರ ಬಗ್ಗೆ ಏನೂ ಹೇಳದಂತೆ ಸೂಚಿಸಲಾಗುತಗ್ತದೆ.  ಬೇರೇನಾದರೂ ಹೇಳಿ ಹಿಂದು-ಮುಸ್ಲಿಂ ವಿಚಾರ ತನ್ನಿ ಎಂದು ಹೇಳಲಾಗುತ್ತದೆ,'' ಎಂದು ಯಾದವ್ ವಿವರಿಸಿದ್ದಾರೆ ಎಂದು newslaundry.com ವರದಿ ಮಾಡಿದೆ. 

"ಮುಸ್ಲಿಮರ ಬಗ್ಗೆ ವರದಿಗಳನ್ನು ಮಾಡುವಂತೆ, ಮುಸ್ಲಿಮರ ಕುರಿತು ವಿವಾದಗಳನ್ನು ಹುಡುಕುವಂತೆ, ಅವರನ್ನು ಪ್ರಚೋದಿಸಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವಂತೆ ಮಾಡಲು ನಮಗೆ ಸೂಚಿಸಲಾಗುತ್ತದೆ,''ಎಂದೂ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News