ಗಡಿಗಳಲ್ಲಿ ಅಸ್ವಸ್ಥಗೊಂಡ, ಸಾಯುತ್ತಿರುವ ಜಾನುವಾರುಗಳಿಂದ ನಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಿದೆ: ಬಿಎಸ್‌ಎಫ್ ಮುಖ್ಯಸ್ಥ
ಹೊಸದಿಲ್ಲಿ: ಪ್ರತಿದಿನ ಗಡಿಗಳಿಗೆ ಬರುತ್ತಿರುವ ಅಸ್ವಸ್ಥಗೊಂಡ ಮತ್ತು ಸಾಯುತ್ತಿರುವ ಜಾನುವಾರುಗಳಿಂದಾಗಿ ಗಡಿಗಳನ್ನು ರಕ್ಷಿಸುವ ಬಿಎಸ್‌ಎಫ್‌ನ(BSF) ಪ್ರಾಥಮಿಕ ಕರ್ತವ್ಯವನ್ನು ನಿರ್ವಹಿಸುವದು ಕಷ್ಟವಾಗುತ್ತಿದೆ ಎಂದು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕ ಪಂಕಜ್ ಕುಮಾರ್ ಸಿಂಗ್ ಅವರು ಸಂಸದೀಯ ಸ್ಥಾಯಿ ಸಮಿತಿಯೊಂದಕ್ಕೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಮಿತಿಯಲ್ಲಿ ನಡೆದ ಚರ್ಚೆಗಳ ಬಗ್ಗೆ ಅರಿವಿರುವ ಮೂಲಗಳು ತಿಳಿಸಿರುವಂತೆ ‘ಗೋ ರಕ್ಷಣೆ’ಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಗೋವುಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವಂತೆ ಪ್ರಾಣಿ ಹಕ್ಕುಗಳ ಗುಂಪುಗಳ ಒತ್ತಡವನ್ನು ತಿಳಿಸಿ ಸೋಮವಾರ ಕೇಂದ್ರದಿಂದ ಸ್ವೀಕರಿಸಿರುವ ಪತ್ರವನ್ನು ಸಿಂಗ್ ಬೆಟ್ಟು ಮಾಡಿದ್ದಾರೆ ಎಂದು theprint.in ವರದಿ ಮಾಡಿದೆ.
ಜಾನುವಾರುಗಳ ಕಳ್ಳಸಾಗಾಣಿಕೆ ಕುರಿತು ಬಿಜೆಪಿ ಸಂಸದರ ಪ್ರಶ್ನೆಗಳಿಗೆ ಉತ್ತರವಾಗಿ ಸಿಂಗ್,ಸಮಸ್ಯೆ ಎಷ್ಟೊಂದು ತೀವ್ರವಾಗಿದೆಯೆಂದರೆ ಕೆಲವೊಮ್ಮೆ ಬಿಎಸ್‌ಎಫ್‌ನ ಪ್ರಾಥಮಿಕ ಕರ್ತವ್ಯವನ್ನು ನಿರ್ವಹಿಸಲೂ ತೋಂದರೆಯಾಗುತ್ತಿದೆ ಎಂದು ಗೃಹ ಸಚಿವಾಲಯದ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರುಗಳ ಕಳ್ಳಸಾಗಾಣಿಕೆ ಪ್ರಮುಖ ಸಮಸ್ಯೆಯಾಗಿದೆ. ಕಳೆದ ವರ್ಷ ಬಿಎಸ್‌ಎಫ್ ವಶಪಡಿಸಿಕೊಂಡ ಜಾನುವಾರುಗಳ ಸಂಖ್ಯೆ 21,917ಕ್ಕಿಳಿದಿದೆ (ಶೇ.53ರಷ್ಟು ಕುಸಿತ).
ಸ್ಥಾಯಿ ಸಮಿತಿ ಸದಸ್ಯರು ವಿಷಯವನ್ನು ಮೊದಲು ಪ್ರಸ್ತಾಪಿಸಿದ್ದರು. ಸೂಕ್ತ ಸಂಪನ್ಮೂಲಗಳ ಕೊರತೆಯು ಜಾನುವಾರುಗಳ ಸಾವಿಗೆ ಕಾರಣವಾಗುತ್ತಿರುವುದು ಕಳವಳಕಾರಿಯಾಗಿದೆ. ಹೀಗಾಗಿ ಶಿಫಾರಸುಗಳನ್ನು ಮಾಡಲು ಬಿಎಸ್‌ಎಫ್‌ನಿಂದ ಮಾಹಿತಿಗಳನ್ನು ಕೇಳಿದ್ದರು ಎಂದು ಸಮಿತಿಯಲ್ಲಿನ ಚರ್ಚೆಗಳ ಕುರಿತು ಮಾಹಿತಿ ಹೊಂದಿರುವ ಮೂಲವೊಂದು ತಿಳಿಸಿತು.
theprint ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಿಂಗ್ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ಅಭಿಷೇಕ್ ಮನು ಸಿಂಘ್ವಿ ಅವರನ್ನು ಸಂಪರ್ಕಿಸಿತ್ತಾದರೂ ಅವರು ಪ್ರತಿಕ್ರಿಯಿಸಿಲ್ಲ.
ಬಿಎಸ್‌ಎಫ್ ಅಧಿಕಾರವ್ಯಾಪ್ತಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳೊಂದಿನ ಗಡಿಗಳಲ್ಲಿ ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ಮೊದಲಿನ 15 ಕಿ.ಮೀ.ಗಳಿಂದ 50 ಕಿ.ಮೀ.ಗಳಿಗೆ ವಿಸ್ತರಿಸಿರುವ ಕೇಂದ್ರ ಸರಕಾರದ 2021ರ ಅಧಿಸೂಚನೆಯನ್ನೂ ವಿಪಕ್ಷ ಸಂಸದರು ಸಭೆಯಲ್ಲಿ ಪ್ರಶ್ನಿಸಿದ್ದರು. ರಾಜ್ಯಗಳೊಂದಿಗೆ ಸಮಾಲೋಚಿಸದೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರದ ಈ ನಿರ್ಧಾರವು ರಾಜಕೀಯ ಕೋಲಾಹಲವನ್ನು ಸೃಷ್ಟಿಸಿತ್ತು. ಇದು ಒಕ್ಕೂಟವಾದದ ಮೇಲಿನ ದಾಳಿಯಾಗಿದೆ ಎಂದು ಪ್ರತಿಪಕ್ಷಗಳು ಬಣ್ಣಿಸಿದ್ದವು. ಬಿಎಸ್‌ಎಫ್‌ನ ಚಟುವಟಿಕೆಗಳ ಮೇಲೆ ಕಣ್ಣಿರಿಸುವಂತೆ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪೊಲೀಸರಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ಮೋದಿ, ಯೋಗಿ ಟೀಕಿಸುವಂತಿರಲಿಲ್ಲ: 'ನ್ಯೂಸ್ ನೇಷನ್' ಸುದ್ದಿ ವಾಹಿನಿಗೆ ರಾಜೀನಾಮೆ ನೀಡಿದ ಪತ್ರಕರ್ತ