ಕೀಲಿ ಕೈ ಬೇರೊಬ್ಬರ ಬಳಿಯಿದ್ದಾಗ ಬೀಗದ ಹಿಂದಿನ ವಾಸವನ್ನು ಕಲ್ಪಿಸಿಕೊಳ್ಳಿ: ಉಮರ್‌ ಖಾಲಿದ್ ತಾಯಿ

Update: 2022-09-14 15:15 GMT

ಹೊಸದಿಲ್ಲಿ: ಇಂದಿಗೆ ಉಮರ್ ಬಂಧನವಾಗಿ ಎರಡು ವರ್ಷಗಳು ಪೂರ್ಣಗೊಂಡಿವೆ. ಎರಡು ವರ್ಷಗಳ ಹಿಂದಿನ ಆ ದಿನ ಬೆಳಿಗ್ಗೆಯಿಂದಲೂ ನನ್ನ ಕಣ್ಣ ಮುಂದೆ ಪದೇ ಪದೇ ಸುಳಿದಾಡುತ್ತಿದೆ. ಈ ಎರಡು ವರ್ಷಗಳು ನನಗೆ ಮತ್ತು ಉಮರ್‌ನನ್ನು ಬೆಂಬಲಿಸಿದವರ ಪಾಲಿಗೆ ಸಂಪೂರ್ಣ ಭಿನ್ನವಾಗಿವೆ ಮತ್ತು ಉಮರ್‌ಗೆ ವ್ಯತ್ಯಾಸವೆಂದರೆ ರಾತ್ರಿ ಮತ್ತು ಹಗಲು ಮಾತ್ರ; ಇದು ಬಂಧನದಲ್ಲಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ (Umar Khalid) ಅವರ ತಾಯಿ ಸಬಿಹಾ ಖಾನುಮ್ (Sabiha Khanum) ಮಂಗಳವಾರ ದಿಲ್ಲಿಯ ಪ್ರೆಸ್ ಕ್ಲಬ್‌ನಲ್ಲಿ ತನ್ನ ಪುತ್ರನನ್ನು ಬೆಂಬಲಿಸಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಡಿದ ಹತಾಶ ನುಡಿಗಳು.....
 
‘ಪ್ರತಿ ವಾರ ನಾನು ಉಮರ್ ಜೊತೆಯಲ್ಲಿ ಮಾತನಾಡಿದಾಗೆಲ್ಲ ಜೈಲಿನೊಳಗಿನ ಸ್ಥಿತಿಯ ಬಗ್ಗೆ ನಾನು ಆತನನ್ನು ಕೇಳುತ್ತಿರುತ್ತೇನೆ. ಜೈಲಿನ ಪುಟ್ಟ ಸೆಲ್‌ವೊಂದರಲ್ಲಿ ಆತನನ್ನು ಇರಿಸಲಾಗಿದೆ. ಕೀಲಿ ಕೈ ಬೇರೊಬ್ಬರ ಬಳಿಯಿರುವಾಗ ಬೀಗದ ಹಿಂದೆ ವಾಸವಾಗಿರುವುದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ಬಾಗಿಲು ಮುಚ್ಚಿದ ಇಕ್ಕಟ್ಟಾದ ಜಾಗದಲ್ಲಿ ವಾಸವಿರುವಾಗ ಉಂಟಾಗುವ ಭಯವನ್ನು ನೀವೇ ಊಹಿಸಿ’ ಎಂದು ಹೇಳಿದ ಸಬಿಹಾ, ‘ಆದರೆ ಉಮರ್ ಈ ಎಲ್ಲ ಪ್ರತಿಕೂಲಗಳನ್ನು ಸಂಪೂರ್ಣ ಧೈರ್ಯದಿಂದ ಎದುರಿಸುತ್ತಿದ್ದಾನೆ. ಪ್ರಕರಣದ ಎಲ್ಲ ಎಫ್‌ಐಆರ್‌ಗಳು ಮತ್ತು ಕಾನೂನಿನ ಅಂಶಗಳು ನಮಗೆಲ್ಲ ಗೊತ್ತಿದೆ. ಆದರೆ ನಮ್ಮ ವೈಯಕ್ತಿಕ ಸಂಭಾಷಣೆಗಳು ಹೇಗಿರುತ್ತವೆ ಎನ್ನುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸಿದ್ದೆ’ ಎಂದರು ಎಂದು thewire.in ವರದಿ ಮಾಡಿದೆ.
  
‘ಉಮರ್‌ಗೆ ಆಹಾರ ಮತ್ತು ಪಾನೀಯದಲ್ಲಿ ಆಸಕ್ತಿಯಿಲ್ಲ ಎನ್ನುವುದು ಆತನ ಸ್ನೇಹಿತರಿಗೆ ಗೊತ್ತಿದೆಯಾದರೂ ನಾನು ಆಗಾಗ್ಗೆ ಆತನನ್ನು ಏನು ತಿಂದಿದ್ದೀಯಾ ಎಂದು ಕೇಳುತ್ತಿರುತ್ತೇನೆ. ಆದರೆ ಆತ ಏನು ತಿಂದಿದ್ದಾನೆ ಮತ್ತು ಏನನ್ನು ತಿಂದಿಲ್ಲ ಎನ್ನುವುದನ್ನು ಆಲಿಸುವಾಗ ನನ್ನ ಹೃದಯವು ಭಾರವಾಗುತ್ತದೆ. ಕೆಲವು ತಿಂಗಳುಗಳ ಹಿಂದೆ ನ್ಯಾಯಾಲಯದಲ್ಲಿ ಭೇಟಿಯಾಗಿದ್ದಾಗಲೂ ಆತ ಹೆಚ್ಚು ತಿನ್ನುವುದಿಲ್ಲ ಎನ್ನುವುದು ಗೊತ್ತಿದ್ದರೂ ಏನನ್ನು ತಿಂದಿದ್ದೀಯಾ’ ಎಂದು ಆತನನ್ನು ಕೇಳಿದ್ದೆ ಎಂದು ಅವರು ಹೇಳಿದರು. ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಕೋಮು ಹಿಂಸಾಚಾರವನ್ನು ಭುಗಿಲೆಬ್ಬಿಸಲು ಸಂಚು ಹೂಡಿದ್ದ ಆರೋಪದಲ್ಲಿ ಉಮರ್ ಖಾಲಿದ್‌ರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ 2020, ಸೆಪ್ಟಂಬರ್‌ನಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಮೋದಿ, ಯೋಗಿ ಟೀಕಿಸುವಂತಿರಲಿಲ್ಲ ಎಂದು ಆರೋಪಿಸಿ ರಾಜೀನಾಮೆ ನೀಡಿದ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News