ಸಂವಿಧಾನದ ಪ್ರಸ್ತಾವನೆಯಲ್ಲಿ 'ಜಾತ್ಯತೀತ' ಪದ ಸೇರಿಸುವುದಕ್ಕಿಂತ ಮುಂಚೆಯೇ ಭಾರತ ಜಾತ್ಯತೀತವಾಗಿತ್ತು: ಸುಪ್ರೀಂ ಕೋರ್ಟ್

Update: 2022-09-15 12:03 GMT

ಹೊಸದಿಲ್ಲಿ: ಭಾರತ ಯಾವತ್ತೂ ಜಾತ್ಯತೀತ(secular) ರಾಷ್ಟ್ರವಾಗಿತ್ತು ಹಾಗೂ ದೇಶದ ಸಂವಿಧಾನದ 'ಪ್ರಸ್ತಾವನೆ'ಯಲ್ಲಿ ಜಾತ್ಯತೀತ ಎಂಬ ಪದವನ್ನು ಸೇರಿಸುವುದು ಸೂಕ್ತವೆಂದು ಸಂವಿಧಾನ ಕತೃರು ನಿರ್ಧರಿಸದೇ ಇರುವಾಗಲೂ ದೇಶ ಜಾತ್ಯತೀತವಾಗಿತ್ತು ಎಂದು ಸುಪ್ರೀಂ ಕೋರ್ಟ್(Supreme Court) ಬುಧವಾರ ಹೇಳಿದೆ.

ಹಿರಿಯ ವಕೀಲ ಹುಝೇಫಾ ಅಹ್ಮದಿ ಅವರು ಸಂವಿಧಾನದ ಪ್ರಸ್ತಾವನೆ ಮತ್ತು 51ಎ ವಿಧಿ (42ನೇ  ತಿದ್ದುಪಡಿ ಮೂಲಕ ಸೇರಿಸಿದ)ಯನ್ನು ಉಲ್ಲೇಖಿಸಿ ವಿವಿಧ ಸಮುದಾಯಗಳ ನಡುವೆ ಜಾತ್ಯತೀತ ಭಾವನೆ ಮತ್ತು ಭ್ರಾತೃತ್ವವನ್ನು ಸಂವಿಧಾನ ಕಡ್ಡಾಯಗೊಳಿಸಿದೆ ಎಂದು ಹೇಳಿದಾಗ ಪ್ರತಿಕ್ರಿಯಿಸಿದ ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಜಸ್ಟಿಸ್ ಸುಧಾಂಶು ಧುಲಿಯಾ ಅವರ ಪೀಠ "ಪ್ರಸ್ತಾವನೆಯಲ್ಲಿ ಜಾತ್ಯತೀತ ಎಂಬ ಪದ ಇರದೇ ಇದ್ದಾಗಲೂ ನಾವು ಜಾತ್ಯತೀತ ದೇಶವಾಗಿದ್ದೆವು.'' ಎಂದು ಹೇಳಿದೆ.

"ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯತೀತ ಪದ ಸೇರಿಸಿದ ನಂತರ ನಾವು ಜಾತ್ಯತೀತವಾಗಿಲ್ಲ,'' ಎಂದು ಪೀಠ ಹೇಳಿತು.

"ಮುಸ್ಲಿಂ ಮಹಿಳೆಯೊಬ್ಬರು ಶಿಕ್ಷಣ ಸಂಸ್ಥೆಗೆ ಹಿಜಾಬ್ ಧರಿಸಿ ಬಂದಾಗ ಒಂದು ವರ್ಗ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿದರೆ, ಸಮಸ್ಯೆಯು ತೊಂದರೆ ಸೃಷ್ಟಿಸುವವರಲ್ಲಿ ಇದೆ, ಮಹಿಳೆ ಧರಿಸಿದ ಉಡುಪಿನಲ್ಲಲ್ಲ,'' ಎಂದು ಅಹ್ಮದಿ ಹೇಳಿದರಲ್ಲದೆ  ಹಿಜಾಬ್ ನಿಷೇಧ ಜಾರಿಗೊಳಿಸಿ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವ ಬದಲು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಸರಕಾರದ ಆದ್ಯತೆಯಾಗಬೇಕು ಎಂದೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News