ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸಿ ಶೆಹ್ಲಾ ರಶೀದ್‌ರ ಅರ್ಜಿಗೆ ಉತ್ತರಿಸಿ: ಝೀ ನ್ಯೂಸ್‌ಗೆ ಕೋರ್ಟ್ ನಿರ್ದೇಶ

Update: 2022-09-16 10:53 GMT

ಹೊಸದಿಲ್ಲಿ,ಸೆ.16: ಝೀ ನ್ಯೂಸ್(Zee News) ತನ್ನಿಂದ ಬೇಷರತ್ ಕ್ಷಮೆಯನ್ನು ಯಾಚಿಸಬೇಕು ಮತ್ತು ಅದನ್ನು ಪ್ರಸಾರಿಸಬೇಕು ಎಂದು ಆಗ್ರಹಿಸಿ ಮಾಜಿ ಜೆಎನ್‌ಯು(JNU) ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ (Shehla Rashid) ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು(Delhi High Court) ಸುದ್ದಿವಾಹಿನಿಗೆ ಸೂಚಿಸಿದೆ.

ತನ್ನ ಘನತೆಗೆ ಉಂಟಾಗಿರುವ ಹಾನಿ ಮತ್ತು ಪೂರ್ವಾಗ್ರಹವನ್ನು ಶಮನಿಸಲು ಝೀ ನ್ಯೂಸ್ ಪ್ರೈಮ್ ಟೈಂ ಕಾರ್ಯಕ್ರಮದಲ್ಲಿ ಕ್ಷಮೆ ಯಾಚನೆಯನ್ನು ಪ್ರಸಾರಿಸಬೇಕು ಎಂದು ಶೆಹ್ಲಾ ಹೇಳಿದ್ದಾರೆ.

ಶೆಹ್ಲಾ ಕುರಿತು ಝೀ ನ್ಯೂಸ್ ಕಾರ್ಯಕ್ರಮವು ನೀತಿ ಸಂಹಿತೆ,ಪ್ರಸಾರ ಮಾನದಂಡಗಳು ಹಾಗೂ ವರದಿಗಾರಿಕೆಯಲ್ಲಿ ಸಮದರ್ಶಿತ್ವ ಮತ್ತು ವಸ್ತುನಿಷ್ಠತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಕಳೆದ ಮಾರ್ಚ್‌ನಲ್ಲಿ ಹೇಳಿದ್ದ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ (ಎನ್‌ಬಿಡಿಎ)ಯು, ಕಾರ್ಯಕ್ರಮವನ್ನು ತೆಗೆದುಹಾಕುವಂತೆ ಸುದ್ದಿವಾಹಿನಿಗೆ ನಿರ್ದೇಶ ನೀಡಿತ್ತು.

2020,ನ.30ರಂದು ಪ್ರಸಾರವಾಗಿದ್ದ ಕಾರ್ಯಕ್ರಮವು ಶೆಹ್ಲಾರಿಂದ ದೂರವಾಗಿರುವ ಅವರ ತಂದೆಯ ಸಂದರ್ಶನವನ್ನು ಒಳಗೊಂಡಿತ್ತು.
ಶೆಹ್ಲಾ ಭಯೋತ್ಪಾದನೆಗೆ ಆರ್ಥಿಕ ನೆರವು,ತಪ್ಪು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಶೆಹ್ಲಾರ ತಂದೆ ಆ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರದ ಆರೋಪಗಳನ್ನು ಎದುರಿಸುತ್ತಿದ್ದು, ಸಂದರ್ಶನದಲ್ಲಿ ಅವುಗಳನ್ನು ನಿರಾಕರಿಸಿದ್ದರು. ವಾಹಿನಿಯು ಶೆಹ್ಲಾರನ್ನು ಸಂಪರ್ಕಿಸಿ ಅವರ ಅಹವಾಲನ್ನು ಆಲಿಸುವ ಗೋಜಿಗೆ ಹೋಗಿರಲಿಲ್ಲ.

ಝೀ ನ್ಯೂಸ್ ಕಥನದ ಒಂದು ಮಗ್ಗಲನ್ನು ಮಾತ್ರ ಸಾದರಪಡಿಸಿತ್ತು. ಅದು ಆಕ್ಷೇಪಾರ್ಹ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಮುನ್ನ ಶೆಹ್ಲಾರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಅವರನ್ನು ಸಂಪರ್ಕಿಸಲು ವಿಫಲಗೊಂಡಿದ್ದಷ್ಟೇ ಅಲ್ಲ, ಅವರು ಆರೋಪಗಳನ್ನು ನಿರಾಕರಿಸಿದ್ದನ್ನು ಕ್ಷಣಿಕವಾಗಿ ಉಲ್ಲೇಖಿಸುವ ಮೂಲಕ ಅವರ ಹೇಳಿಕೆಯನ್ನು ಸಮಂಜಸವಾಗಿ ಮಂಡಿಸಲು ಸಹ ವಿಫಲಗೊಂಡಿತ್ತು ಎಂದು ಎನ್‌ಬಿಡಿಎ ಹೇಳಿತ್ತು.

ಝೀ ನ್ಯೂಸ್ ನಂತರ ಕಾರ್ಯಕ್ರಮವನ್ನು ತೆಗೆದುಹಾಕಿತ್ತಾದರೂ, ಶೆಹ್ಲಾ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಎನ್‌ಬಿಡಿಎ ಆದೇಶದಲ್ಲಿ ಪರಿಷ್ಕರಣೆಯನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News