ತನ್ನ ವಿರುದ್ಧದ ಪ್ರಕರಣಗಳ ರದ್ದತಿ ಕೋರಿರುವ ಝುಬೈರ್ ಅರ್ಜಿಗೆ ದಿಲ್ಲಿ ಪೊಲೀಸರ ವಿರೋಧ

Update: 2022-09-16 10:57 GMT
ಮುಹಮ್ಮದ್ ಝುಬೈರ್ 

ಹೊಸದಿಲ್ಲಿ: ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಆಲ್ಟ್‌ನ್ಯೂಸ್‌ನ ಸಹಸ್ಥಾಪಕ ಮುಹಮ್ಮದ್ ಝುಬೈರ್ (Mohammad Zubair) ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ದಿಲ್ಲಿ ಪೊಲೀಸರು(Delhi Police) ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಅಧಿಕಾರಿಗಳು ವಶಪಡಿಸಿಕೊಂಡಿರುವ ತನ್ನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನ್ನು ಬಿಡುಗಡೆಗೊಳಿಸುವಂತೆ ಝುಬೈರ್ ಮನವಿಯನ್ನೂ ಪೊಲೀಸರು ವಿರೋಧಿಸಿದ್ದಾರೆ.

 ಝುಬೈರ್‌ರಿಂದ ವಶಪಡಿಸಿಕೊಳ್ಳಲಾಗಿರುವ ವಿದ್ಯುನ್ಮಾನ ಸಾಧನಗಳನ್ನು ಈಗಾಗಲೇ ದಿಲ್ಲಿಯ ರೋಹಿಣಿಯಲ್ಲಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಈ ಸಾಧನಗಳಿಂದ ಮರುಪಡೆಯಲಾಗುವ ದತ್ತಾಂಶಗಳನ್ನು ಝುಬೈರ್ 2018ರಲ್ಲಿ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ವಿಶ್ಲೇಷಿಸಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಈ ಟ್ವೀಟ್‌ಗೆ ಸಂಬಂಧಿಸಿದಂತೆ ಝುಬೈರ್ ವಿರುದ್ಧ ಏಳು ಎಫ್‌ಐಆರ್‌ಗಳು ದಾಖಲಾಗಿದ್ದವು.

ಝುಬೈರ್ 2018ರಲ್ಲಿ ಮಾಡಿದ್ದ ಟ್ವೀಟ್‌ನಂತಹ ಇತರ ಟ್ವೀಟ್‌ಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ಝುಬೈರ್ ವಿರುದ್ಧದ ಎಲ್ಲ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬಳಿಕ ಅವರು ಜು.20ರಂದು 24 ದಿನಗಳ ಜೈಲುವಾಸದಿಂದ ಬಿಡುಗಡೆಗೊಂಡಿದ್ದರು.

ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News