ಗುಜರಾತ್‍: ತನ್ನ ಪತಿ ಮಹಿಳೆ ಎಂದು ತಿಳಿದದ್ದು ವಿವಾಹವಾಗಿ ಎಂಟು ವರ್ಷ ಬಳಿಕ !

Update: 2022-09-17 03:32 GMT

ಹೊಸದಿಲ್ಲಿ: ಗುಜರಾತ್‍ನ 40 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ವಿವಾಹವಾಗಿ ಎಂಟು ವರ್ಷದ ಬಳಿಕ ತನ್ನ ಪತಿ ವಾಸ್ತವವಾಗಿ ಮಹಿಳೆ ಎಂಬ ಸತ್ಯ ಅರಿವಾದ ಅಪರೂಪದ ಪ್ರಕರಣ ವರದಿಯಾಗಿದೆ.

ವಾಸ್ತವವಾಗಿ ಈ ಪತಿ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪುರುಷ ರೂಪ ಪಡೆದು ಈ ಮಹಿಳೆಯನ್ನು ವಿವಾಹವಾಗಿದ್ದ ಅಂಶ ಬೆಳಕಿಗೆ ಬಂದಿದೆ.

ಗೋತ್ರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಶೀತಲ್ ಎಂಬ ಮಹಿಳೆ ದೂರು ನೀಡಿದ್ದಾರೆ. ವಿರಾಜ್ ವರ್ಧನ್ (ಈ ಮೊದಲು ವಿಜೈತಾ ಆಗಿದ್ದರು) ವಿರುದ್ಧ "ಅಸಹಜ ಲೈಂಗಿಕತೆ" ಮತ್ತು ವಂಚನೆ ಆರೋಪ ಹೊರಿಸಿದ್ದಾಳೆ. ಪತಿಯ ಕುಟುಂಬದವರ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದೆ.

ಒಂಬತ್ತು ವರ್ಷ ಹಿಂದೆ ವೈವಾಹಿಕ ವೆಬ್‍ಸೈಟ್ ಒಂದರ ಮೂಲಕ ವಿರಾಜ್ ವರ್ಧನ್‍ನನ್ನು ಶೀತಲ್ ಭೇಟಿ ಮಾಡಿದ್ದರು. ಶೀತಲ್ ಅವರ ಮಾಜಿ ಪತಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಬಳಿಕ 14 ವರ್ಷದ ಮಗಳನ್ನು ಸಾಕುವ ಹೊಣೆ ಶೀತಲ್ ಮೇಲೆ ಬಿದ್ದಿತ್ತು. 2014ರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇವರ ವಿವಾಹವಾಗಿತ್ತು. ಈ ಜೋಡಿ ಕಾಶ್ಮೀರಕ್ಕೆ ಮಧುಚಂದ್ರಕ್ಕೆ ತೆರಳಿತ್ತು. "ಆದಾಗ್ಯೂ ಆ ವ್ಯಕ್ತಿ ಒಂದಲ್ಲ ಒಂದು ಕಾರಣ ನೀಡಿ ಹಲವು ದಿನಗಳ ಕಾಲ ವೈವಾಹಿಕ ಸಂಬಂಧವನ್ನು ಪರಿಪೂರ್ಣಗೊಳಿಸಿರಲಿಲ್ಲ. ಮಹಿಳೆ ಒತ್ತಾಯಪಡಿಸಿದಾಗ, ಕೆಲ ವರ್ಷಗಳ ಹಿಂದೆ ರಷ್ಯಾದಲ್ಲಿ ಅಪಘಾತವೊಂದರಲ್ಲಿ ಗಾಯವಾಗಿದ್ದ ಕಾರಣ ಲೈಂಗಿಕತೆಗೆ ಅಸಮರ್ಥ ಎಂದು ತಿಳಿಸಿದ್ದಾಗಿ ಮಹಿಳೆ ದೂರಿದ್ದಾರೆ" ಎಂದು ಪೊಲೀಸರು ವಿವರ ನೀಡಿದ್ದಾರೆ.

ಪುಟ್ಟ ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಾಗಿ ಮಹಿಳೆಗೆ ಭರವಸೆ ನೀಡಿದ್ದ. 2020ರ ಜನವರಿಯಲ್ಲಿ ಬೊಜ್ಜು ನಿವಾರಣೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ಹೇಳಿದ. ಆದರೆ ವಿದೇಶದಲ್ಲಿದ್ದಾಗ ತಾನು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಸ್ಪಷ್ಟಪಡಿಸಿದ. ಬಳಿಕ ಪತ್ನಿ ಜತೆ ಅಸಹಜ ಲೈಂಗಿಕತೆಗೆ ತೊಡಗಿದ. ಈ ಸತ್ಯವನ್ನು ಬಯಲುಗೊಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದ ಎಂದು ದೂರಲಾಗಿದ್ದು, ಆರೋಪಿ ದೆಹಲಿಯ ನಿವಾಸಿ ಎಂದು ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News