ಸ್ಥಳೀಯ ಭಾಷೆಗಳನ್ನು ಬಳಸುವಂತೆ ಬ್ಯಾಂಕುಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ ಸರಿಯಾಗಿದೆ: ಪಿ.ಚಿದಂಬರಂ

Update: 2022-09-17 15:47 GMT

ಹೊಸದಿಲ್ಲಿ,ಸೆ.17: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಗ್ರಾಹಕರೊಂದಿಗೆ ವ್ಯವಹರಿಸುವ ತಮ್ಮ ಸಿಬ್ಬಂದಿಗಳು ಸ್ಥಳೀಯ ಭಾಷೆಯಲ್ಲಿ ಮಾತನಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಬ್ಯಾಂಕುಗಳನ್ನು ಆಗ್ರಹಿಸಿರುವುದು ಸರಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಶನಿವಾರ ಹೇಳಿದ್ದಾರೆ.

ವಿಮಾ ಸಂಸ್ಥೆಗಳು,ವಿಮಾನಯಾನ ಸಂಸ್ಥೆಗಳು ಮತ್ತು ಮೊಬೈಲ್ ದೂರವಾಣಿ ಕಂಪನಿಗಳಂತಹ ಗ್ರಾಹಕ ಆಧಾರಿತ ಉದ್ಯಮಗಳಿಗೂ ಇದೇ ಸಲಹೆಯನ್ನು ನೀಡುವಂತೆ ಚಿದಂಬರಂ ವಿತ್ತಸಚಿವೆಯನ್ನು ಆಗ್ರಹಿಸಿದ್ದಾರೆ.

‘ಗ್ರಾಹಕರೊಂದಿಗೆ ವ್ಯವಹರಿಸುವ ಸಿಬ್ಬಂದಿಗಳು ಒಂದೇ ಭಾಷೆ (ಹಿಂದಿ)ಯಲ್ಲಿ ಮಾತನಾಡುವುದು ಕಿರಿಕಿರಿಯನ್ನುಂಟು ಮಾಡುತ್ತಿದೆ.

 ಭಾರತದಲ್ಲಿ ಅನೇಕ ಭಾಷೆಗಳಿವೆ ಮತ್ತು ಎರಡು ಅಧಿಕೃತ ಭಾಷೆಗಳು (ಹಿಂದಿ ಮತ್ತು ಇಂಗ್ಲಿಷ್) ಇವೆ ಎನ್ನುವುದನ್ನು ನಾವು ನಿರಂತರವಾಗಿ ನೆನಪಿಸಿಕೊಳ್ಳಬೇಕು ’ ಎಂದು ಚಿದಂಬರಂ ಟ್ವೀಟಿಸಿದ್ದಾರೆ.

ಶುಕ್ರವಾರ ಮುಂಬೈನಲ್ಲಿ ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ)ದ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಂದರ್ಭ ಬ್ಯಾಂಕುಗಳು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ಆಗ್ರಹಿಸಿದ್ದ ಸೀತಾರಾಮನ್,ನೀವು ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದ ಸಿಬ್ಬಂದಿಯನ್ನು ಹೊಂದಿದ್ದರೆ ಅದು ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದರು.

 ‘ಬ್ಯಾಂಕುಗಳು ಸ್ಥಳೀಯ ಭಾಷೆ ಗೊತ್ತಿಲ್ಲದ ಸಿಬ್ಬಂದಿಗಳನ್ನು ಹೊಂದಿದ್ದರೆ ಅವರನ್ನು ಗ್ರಾಹಕರೊಂದಿಗೆ ಸಂವಹನ ಅಗತ್ಯವಿರುವ ಹುದ್ದೆಗಳಿಗೆ ನಿಯೋಜಿಸಬಾರದು. ಸ್ಥಳೀಯ ಭಾಷೆ ತಿಳಿದಿರದ ಮತ್ತು ನಿರ್ದಿಷ್ಟ ಭಾಷೆಯಲ್ಲಿ ಮಾತನಾಡುವಂತೆ ಗ್ರಾಹಕರಿಗೆ ಒತ್ತಾಯಿಸುವ ಮತ್ತು ಹಾಗೆ ಮಾಡದಿದ್ದರೆ ಅವರು ಭಾರತೀಯರಲ್ಲ ಎಂದು ದೇಶಭಕ್ತಿಯ ಪಾಠವನ್ನು ಹೇಳುವ ಸಿಬ್ಬಂದಿಗಳನ್ನು ನಾವು ಹೊಂದಿರಲು ಸಾಧ್ಯವಿಲ್ಲ ’ ಎಂದು ಹೇಳಿದ ಸೀತಾರಾಮನ್,‘ನಾನು ದಕ್ಷಿಣ ಭಾರತಕ್ಕೆ ಸೇರಿದ್ದರೂ ಹಿಂದಿಯನ್ನು ಕಲಿಯುವ ಪ್ರಯತ್ನ ಮಾಡಿದ್ದೇನೆ. ನನ್ನ ಕರ್ಮಭೂಮಿ ಇದಾಗಿರುವಾಗ ನಾನು ಸ್ಥಳೀಯ ಭಾಷೆಯನ್ನು ಕಲಿಯಬೇಕು. ಒಂದು ಪ್ರದೇಶಕ್ಕೆ ನಿಯೋಜಿಸಲ್ಪಟ್ಟಾಗ ಆ ಪ್ರದೇಶದ ಭಾಷೆಯನ್ನು ಮಾತನಾಡದ ಅಧಿಕಾರಿಗಳನ್ನು ಐಬಿಎ ಹೇಗೆ ಅಂಗೀಕರಿಸುತ್ತದೆ ಎನ್ನುವುದು ನನಗೆ ತಿಳಿದಿಲ್ಲ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News