ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕ ಮಾಡಿ: ನಿರ್ಮಲಾ ಸೀತಾರಾಮನ್ ಸಲಹೆ

Update: 2022-09-17 16:21 GMT

ಹೊಸದಿಲ್ಲಿ, ಸೆ. 17: ಬ್ಯಾಂಕ್‌ಗಳಲ್ಲಿ (Bank) ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( Nirmala Sitharaman ) ಅವರು ಶುಕ್ರವಾರ ಸಲಹೆ ನೀಡಿದ್ದಾರೆ.

ಮುಂಬೈಯಲ್ಲಿ ನಡೆದ ಭಾರತೀಯ ಬ್ಯಾಂಕ್‌ಗಳ ಸಂಘಟನೆಯ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನೀವು ವ್ಯವಹಾರ ನಡೆಸಲು ಅಲ್ಲಿದ್ದೀರಿ. ಪ್ರಜೆಗಳಲ್ಲಿ ನಿರ್ದಿಷ್ಟ ಮೌಲ್ಯಗಳನ್ನು ರೂಪಿಸಲು ನೀವು ಅಲ್ಲಿರುವುದು ಅಲ್ಲ ಎಂದಿದ್ದಾರೆ. 
ಭಾರತ ವೈವಿಧ್ಯತೆ ಹೊಂದಿರುವ ದೇಶವಾಗಿರುವುದರಿಂದ ಬ್ಯಾಂಕ್ ಸಿಬ್ಬಂದಿಗೆ ಸ್ಥಳೀಯ ಭಾಷೆ ಗೊತ್ತಿರುವುದು ತುಂಬಾ ಅಗತ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ಹಿಂದೂ ಬ್ಯುಸಿನಸ್ ಲೈನ್ ವರದಿ ಮಾಡಿದೆ.

ಸ್ಥಳೀಯ ಶಾಖೆಗಳ  ಸಿಬ್ಬಂದಿ ಸ್ಥಳೀಯ ಭಾಷೆ ಮಾತನಾಡುವುದಿಲ್ಲ. ಬದಲಾಗಿ ದೇಶ ಭಕ್ತಿಯ ಪಾಠ ಹೇಳುತ್ತಾರೆ. ‘‘ನಿಮಗೆ ಹಿಂದಿ ಗೊತ್ತಿಲ್ಲವೇ? ನೀವು ಭಾರತೀಯನಲ್ಲದೇ ಇರಬಹುದು’’ ಎಂದು ನೀವು ಹೇಳುವುದರಿಂದ ಯಾವುದೇ ಉತ್ತಮ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 
ಶಾಖೆಗಳಲ್ಲಿ ನೇಮಕರಾದ ಸಿಬ್ಬಂದಿಯ ಪರಿಶೀಲನೆ ನಡೆಸಿ. ಸ್ಥಳೀಯ ಭಾಷೆಯನ್ನು ಯಾರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಿ. ಅಂಥವರಿಗೆ ಗ್ರಾಹಕರೊಂದಿಗೆ ವ್ಯವಹರಿಸುವ ಕೆಲಸ ನೀಡಬೇಡಿ. ಸಿಬ್ಬಂದಿ ನೇಮಕ ಮಾಡಿಕೊಳ್ಳುವ ರೀತಿಯ ಬಗ್ಗೆ ನೀವು ತುಂಬಾ ಸೂಕ್ಷ್ಮವಾಗಿರಬೇಕು ಎಂದು ಅವರು ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ.

‘‘ನಾವು ನಿಮಗೆ ಸೇವೆ ನೀಡಲು ಸಿದ್ಧ’’ ಎಂದು ನೀವು ಹೇಳಬೇಕೆಂದು ನಾನು ಬಯಸುತ್ತೇನೆ. ಕ್ರಿಯಾಶೀಲರಾಗಿ ಹಾಗೂ ‘‘ನೀವು ಬಯಸಿದಾಗ ನಾವು ಭೇಟಿಯಾಗಲು ಹಾಗೂ ವ್ಯವಾಹಾರ ನಡೆಸಲು ಸಿದ್ಧ’’ ಎಂದು ಗ್ರಾಹಕರಿಗೆ ತಿಳಿಸಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News