ಭಾರತ-ರಶ್ಯ ನಡುವೆ ವೀಸಾ ರಹಿತ ಪ್ರಯಾಣ ಒಡಂಬಡಿಕೆಗೆ ಪುಟಿನ್ ಆಗ್ರಹ

Update: 2022-09-17 16:23 GMT

ಸಮರಖಂಡ್,ಸೆ.17: ಭಾರತ ಹಾಗೂ ರಶ್ಯ ನಡುವೆ ವೀಸಾ ರಹಿತ ಪ್ರಯಾಣದ ಒಪ್ಪಂದವೇರ್ಪಡಬೇಕೆಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಪಾದಿಸಿದ್ದಾರೆ. ಉಝ್ಬೇಕಿಸ್ತಾನದ ಸಮರಖಂಡ್‌ನಲ್ಲಿ ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಓ)ಯ ವಾರ್ಷಿಕ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಸಂದರ್ಭ ಪುಟಿನ್ ಅವರು ಈ ವಿಷಯವನ್ನು ಪ್ರಸ್ತಾವಿಸಿದ್ದಾರೆ. ಭಾರತದ ಶ್ರೀಮಂತ ಇತಿಹಾಸ ಹಾಗೂ ಪುರಾತನ ಸಂಸ್ಕೃತಿಯ ಬಗ್ಗೆ ರಶ್ಯದ ಜನತೆ ಸಾಂಪ್ರದಾಯಿಕವಾಗಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆಂದು ಅವರು ಹೇಳಿದ್ದಾರೆ.

 ಈ ಹಿನ್ನೆಲೆಯಲ್ಲಿ ಉಭಯದೇಶಗಳ ನಡುವೆ ವೀಸಾ ರಹಿತವಾದ ಪ್ರವಾಸಕ್ಕೆ ಅವಕಾಶ ನೀಡುವ ಒಪ್ಪಂದವನ್ನು ಏರ್ಪಡಿಸುವ ನಿಟ್ಟಿನಲ್ಲಿ ಮಾತುಕತೆಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ನಾವು ಪ್ರಸ್ತಾವಿಸುತ್ತೇವೆ ಎಂದು ಪುಟಿನ್ ತಿಳಿಸಿದರು.

 ಮಾತುಕತೆಯ ವೇಳೆ ಮೋದಿ ಅವರು ಮಾಸ್ಕೊ ಹಾಗೂ ಹೊಸದಿಲ್ಲಿ ನಡುವೆ ಹಲವಾರು ದಶಕಗಳಿಂದ ಇರುವ ಮಧುರ ಬಾಂಧವ್ಯವನ್ನು ಪ್ರಸ್ತಾವಿಸಿದರು. ಉಕ್ರೇನ್ ವಿರುದ್ಧ ರಶ್ಯ ಪಡೆಗಳು ಸೇನಾ ಕಾರ್ಯಾಚರಣೆಯನ್ನು ನಡೆಸಿದ ಉಕ್ರೇನ್‌ನಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲು ಪುಟಿನ್ ಅವರು ನೀಡಿದ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News