ಪಾಕ್ ಪ್ರವಾಹದಿಂದಾಗಿ 1.60 ಕೋಟಿ ಮಕ್ಕಳು ಸಂತ್ರಸ್ತ: ವಿಶ್ವಸಂಸ್ಥೆ ಕಳವಳ

Update: 2022-09-17 16:32 GMT

ಇಸ್ಲಾಮಾಬಾದ್,ಸೆ.17: ಪಾಕಿಸ್ತಾನದ ಭೀಕರ ಪ್ರವಾಹದಿಂದಾಗಿ ಸುಮಾರು 1.60 ಕೋಟಿ ಮಂದಿ ಮಕ್ಕಳು ಬಾಧಿತರಾಗಿದ್ದು, ಅವರಲ್ಲಿ ಕನಿಷ್ಠ 30.40 ಲಕ್ಷ ಮಂದಿ ಪ್ರಾಣಾಪಾಯದಲ್ಲಿದ್ದಾರೆ ಹಾಗೂ ಅವರಿಗೆ ತುರ್ತಾಗಿ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಪಾಕಿಸ್ತಾನದ ನೆರೆಪೀಡಿದ ಪ್ರದೇಶಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಅಲ್ಲಿ ಲಕ್ಷಾಂತರ ಮಕ್ಕಳು ಅತಿಸಾರ, ಡೆಂಗೆ ಹಾಗೂ ಹಲವಾರು ಯಾತನಕಾರಿ ಚರ್ಮ ರೋಗಗಳಿಗೆ ತುತ್ತಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ನಿಧಿ (ಯುನಿಸೆಫ್) ಸಂಸ್ಥೆಯ ಪ್ರತಿನಿಧಿ ಅಬ್ದುಲ್ಲಾ ಫಾದಿಲ್ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

    ಸಿಂಧ್ ಪ್ರಾಂತದ ನೆರೆಪೀಡಿತ ಪ್ರದೇಶಗಳಿಗೆ ಎರಡು ದಿನಗಳ ಭೇಟಿಯನ್ನು ಪೂರ್ಣಗೊಳಿಸಿದ ಬಳಿಕ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಈ ಸಲದ ಪ್ರವಾಹವು ಕನಿಷ್ಠ 528 ಮಂದಿ ಮಕ್ಕಳನ್ನು ಬಲಿತೆಗೆದುಕೊಂಡಿದೆಯೆಂದು ತಿಳಿಸಿದರು. ‘‘ ಈ ಪ್ರತಿಯೊಂದು ಮಗುವಿನ ಸಾವು ಕೂಡಾ ಒಂದು ದುರಂತವಾಗಿದ್ದು, ಅದನ್ನು ತಪ್ಪಿಸಬಹುದಾಗಿತ್ತು’’ ಎಂದರು.

     ಅಂದಾಜು 1.60 ಕೋಟಿ ಮಕ್ಕಳು ಭಾರೀ ನೆರೆಯಿಂದಾಗಿ ಸಂತ್ರಸ್ತರಾಗಿದ್ದು, ಅವರ ಪೈಕಿ 30.40 ಲಕ್ಷ ಮಕ್ಕಳಿಗೆ ತಕ್ಷಣವೇ ಜೀವರಕ್ಷಕ ನೆರವಿನ ಅಗತ್ಯವಿದೆ ಎಂದು ಫಾದಿಲ್ ಗಮನಸೆಳೆದರು.

 ಪ್ರವಾಹದಿಂದಾಗಿ ಮನೆಮಾರುಗಳನ್ನು ಕಳೆದುಕೊಂಡ ಸಣ್ಣ ಮಕ್ಕಲು ತೆರೆದ ವಾತಾವರಣದಲ್ಲಿ ತಮ್ಮ ಕುಟುಂಬಗಳ ಜೊತೆ ಬದುಕುತ್ತಿದ್ದಾರೆ. ಅವರಿಗೆ ಯೋಗ್ಯವಾದ ಕುಡಿಯುವ ನೀರು, ಆಹಾರ ದೊರೆಯುತ್ತಿಲ್ಲ. ಅವರ ಪಾಲಕರಿಗೆ ಜೀವನೋಪಾಯವಿಲ್ಲದೆ ನಿರ್ಗತಿಕರಾಗಿದ್ದಾರೆ. ಅಲ್ಲದೆ ಪ್ರವಾಹದಿಂದಾಗಿ ಹಾನಿಗೀಡಾದ ಕಟ್ಟಡಗಳು, ನೆರೆನೀರು ಹಾಗೂ ಹಾವುಗಳು ಇತ್ಯಾದಿಗಳಿಂದ ಅವರ ಬದುಕು ಅಪಾಯದಲ್ಲಿದೆ. ಸಾವಿರಾರು ಶಾಲೆಗಳು, ನೀರುಪೂರೈಕೆ ವ್ಯವಸ್ಥೆಗಳು ಹಾಗೂ ಆರೋಗ್ಯ ಸೌಕರ್ಯಗಳಿಂದ ಅವರು ವಂಚಿತರಾಗಿದ್ದಾರೆ ಎಂದರು. ಹಲವಾರು ತಾಯಂದಿರು ರಕ್ತಹೀನತೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅತ್ಯಂತ ಕಡಿಮೆ ತೂಕದ ಶಿಶುಗಳನ್ನು ಸಲಹುತ್ತಿದ್ದಾರೆ . ಲಕ್ಷಾಂತರ ತಾಯಂದಿರು ಅನಾರೋಗ್ಯಕ್ಕೆ ತುತ್ತಾಗಿದ್ದು, ತಮ್ಮ ಮಕ್ಕಳಿಗೆ ಎದೆಹಾಲು ಕುಡಿಸಲು ಸಾಧ್ಯವಾಗುತ್ತಿಲ್ಲ ಎಂದು ಫಾದಿಲ್ ಕಳವಳ ವ್ಯಕ್ತಪಡಿಸಿದರು.

 ಲಕ್ಷಾಂತರ ಕುಟುಂಬಗಳು ಮನೆಮಾರು ಕಳೆದುಕೊಂಡಿದ್ದು,ಹಲವು ಪ್ರದೇಶಗಳಲ್ಲಿ ಅವು 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನದ ಸೂರ್ಯನ ಬಿಸಿಲನ್ನು ಎದುರಿಸುತ್ತಲೇ ದಿನಗಳೆಯುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News