ಅಮೇಠಿ... ಅದ್ ಎವಿಡೆಯಾನ್?

Update: 2022-09-18 03:38 GMT

ಬಿಜೆಪಿ ಮತ್ತು ಕಾಂಗ್ರೆಸ್‌ನ ಜೋಡೊ ಆಂದೋಲನ ಒಂದೆಡೆ ಯಶಸ್ವಿಯಾಗಿ ನಡೆಯುತ್ತಿರುವಾಗ, ಇತ್ತ ರಾಹುಲ್ ಗಾಂಧಿಯವರು ಭಾರತ್ ಜೋಡೊ ಆಂದೋಲನ ಆರಂಭಿಸಿರುವುದು ಪತ್ರಕರ್ತ ಎಂಜಲು ಕಾಸಿಯನ್ನು ತುಸು ಗೊಂದಲಕ್ಕೀಡು ಮಾಡಿತು. ಉದ್ಘಾಟನೆಗೊಂಡ ಭಾರತ್ ಜೋಡೊ ಆಂದೋಲನದ ಭಾಗವಾಗಿ ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಜೋಡೊ ನಡೆದಿದೆಯೇನೋ ಎಂಬ ಅನುಮಾನ ಶುರುವಾಗಿ ನೇರವಾಗಿ ರಾಹುಲ್‌ಗಾಂಧಿಯವರನ್ನೇ ಕೇಳಿದರೆ ಹೇಗೆ ಎಂದು ತನ್ನ ಜೋಳಿಗೆಯೊಳಗೆ ಪೆನ್ನು, ಕಾಗದ ಜೋಡಿಸಿ ಕೇರಳಕ್ಕೆ ಹೊರಟ. ‘‘ಸಾರ್ ನಮಸ್ಕಾರ....’’ ಎಂದು ಹಲ್ಲುಗಿಂಜುತ್ತಿದ್ದಂತೆಯೇ ರಾಹುಲರು ಕಾಸಿಗೆ ಹೆಗಲ ಮೇಲೆ ಕೈಯಿಟ್ಟು ಫೋಟೊ ಹೊಡೆಸಿಕೊಂಡೂ ಆಗಿತ್ತು. ಬಳಿಕ ‘‘ಆಯಿಯೇ....ಹಮಾರಸಾಥ್ ಜೋಡಿಯೇ...’’ ಎಂದು ಕರೆದರು. ‘‘ಸಾರ್....ನಿಮ್ಮ ಭಾರತ ಜೋಡೊ ಆಂದೋಲನ ಯಶಸ್ವಿಗೆ ಅಭಿನಂದನೆಗಳು....’’ ಕಾಸಿ ಶುಭಾಶಯ ಹೇಳಿದ್ದೇ ರಾಹುಲ್‌ಗಾಂಧಿಯವರು ಇಡೀ ದಕ್ಷಿಣ ಭಾರತದ ಪ್ರಧಾನಿಯಾಗಿಯೇ ಬಿಟ್ಟಂತೆ ಸಂಭ್ರಮಿಸಿದರು. ‘‘ಥ್ಯಾಂಕ್ಯೂ....ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರಲೇ ಬೇಕು....’’

‘ಇದೇನಿದು ಹೊಸ ಪ್ರಮಾಣ ವಚನ’ ಕಾಸಿ ಕಂಗಾಲಾದ. ರಾಜಸ್ಥಾನದಲ್ಲೂ ಜೋಡೊ ಯಶಸ್ವಿಯಾಗಿ, ಬಿಜೆಪಿ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿರಬಹುದೆ ಎಂದು ಅನುಮಾನಿಸಿ ‘‘ಯಾವ ಪ್ರಮಾಣ ವಚನ?’’ ಎಂದು ಕೇಳಿದ. ‘‘ಆಹ್ವಾನ ಪತ್ರಿಕೆ ತಲುಪಿಲ್ಲವೆ? ಮುಂದಿನ ಪ್ರಧಾನಿಯಾಗಿ ಪ್ರಮಾಣ ವಚನ ನಡೆಸುವುದಕ್ಕೆ ನಮ್ಮ ಕಾರ್ಯಕರ್ತರು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ....’’ ರಾಹುಲರು ಮತ್ತೊಮ್ಮೆ ಕಾಸಿಯನ್ನು ತಬ್ಬಿಕೊಂಡರು.

‘‘ಯಾವ ದೇಶದ ಪ್ರಧಾನಿ....ಸಾರ್?’’ ಕಾಸಿ ಅರ್ಥವಾಗದೆ ಮತ್ತೆ ಪ್ರಶ್ನಿಸಿದ.

‘‘ನಾವು ಹೊಸದಾಗಿ ಜೋಡಿಸುವ ಭಾರತದ ಪ್ರಧಾನಿ....’’ ರಾಹುಲರು ಉತ್ತರಿಸಿದರು.

‘‘ಸಾರ್...ಅದು ಎಲ್ಲಿರುತ್ತದೆ?’’ ಕಾಸಿ ಕೇಳಿದ.

‘‘ಹೆ ಹೆ....ನಮ್ಮ ಭಾರತ ಏನಿದ್ದರೂ ಇನ್ನು ಕೇರಳದಲ್ಲೇ....ನಾವೀಗಾಗಲೇ ಅಮೇಠಿಯಿಂದ ಎಲ್ಲ ಸಾಮಾನು ಸರಂಜಾಮುಗಳನ್ನು ಜೋಡಿಸಿಕೊಂಡು ವಯನಾಡಿಗೆ ಬಂದಿದ್ದೇವೆ. ನಾನೀಗ ‘ಒಂದು ವಾರದಲ್ಲಿ ಮಲಯಾಳಂ ಕಲಿಯಿರಿ’ ರ್ಯಾಪಿಡೆಕ್ಸ್ ಕೋರ್ಸಿಗೆ ಸೇರಿದ್ದೇನೆ...’’

‘‘ಅಂದರೆ ವಾಪಸ್ ಉತ್ತರ ಭಾರತಕ್ಕೆ ಅಂದರೆ ಅಮೇಠಿಗೆ ಹೋಗುವುದೇ ಇಲ್ಲವೆ?’’ ಕಾಸಿ ಆತಂಕದಿಂದ ಪ್ರಶ್ನಿಸಿದ.

‘‘ಅಮೇಠಿ...ಅದ್ ಎವಿಡೆಯಾನ್?’’ ರಾಹುಲ್ ಮರು ಪ್ರಶ್ನಿಸಿದರು.

‘‘ಅದೇ ಸಾರ್...ನಿಮ್ಮ ಫ್ಯಾಮಿಲಿ ಹಿಂದೆ ಗೆದ್ದು ಬರುತ್ತಿದ್ದ ಕ್ಷೇತ್ರ...’’

 ‘‘ಹ್ಹೆ ಹ್ಹೆ ನಮ್ಮ ಫ್ಯಾಮಿಲಿ ಎಲ್ಲ ಕೇರಳಕ್ಕೆ ಶಿಫ್ಟ್ ಆಗಿದ್ದೇವೆ. ಮಮ್ಮಿ, ಅಕ್ಕ, ಜೀಜು ಎಲ್ಲರೂ ಕೇರಳದಲ್ಲೇ ಸೆಟ್ಲ್ ಆಗಬೇಕು ಎಂದಿದ್ದೇವೆ. ಇನ್ನು ಏನಿದ್ದರೂ ಕೇರಳದಲ್ಲಿ ಕುಳಿತು ದೇಶದ ರಾಜಕೀಯ ನಡೆಸುತ್ತೇವೆ....’’

‘‘ಅಂದರೆ....’’

‘‘ಅಂದರೆ ಅಮೇಠಿಯನ್ನು ಕಾಂಗ್ರೆಸ್‌ನೊಟ್ಟಿಗೆ ಜೋಡಿಸುವುದು ಕಷ್ಟ. ಆದುದರಿಂದಲೇ, ಅಮೇಠಿ ಬಿಟ್ಟು ಕೇರಳವನ್ನು ಕಾಂಗ್ರೆಸ್‌ಗೆ ಜೋಡಿಸಲಿದ್ದೇವೆ....ಮುಂದಿನ ಚುನಾವಣೆಯಲ್ಲಿ ಮಮ್ಮಿ , ಅಕ್ಕ, ನಾನು, ಜೀಜು ಎಲ್ಲ ಕೇರಳದಲ್ಲೇ ಸ್ಪರ್ಧಿಸುತ್ತಿದ್ದೇವೆ....’’

‘‘ಮತ್ತೆ ಉತ್ತರ ಪ್ರದೇಶದಲ್ಲಿ.....’’

‘‘ಅಲ್ಲಿ ಕಾಂಗ್ರೆಸ್‌ನ ಕೆಲಸ ಎಲ್ಲ ಮುಗಿದಿದೆ...’’

‘‘ಕಾಂಗ್ರೆಸ್ ಮುಗಿದಿದೆ ಎಂದು ಹೇಳುತ್ತೀರಾ? ಅಥವಾ ಕಾಂಗ್ರೆಸ್‌ನ ಕೆಲಸ ಮುಗಿದಿದೆ ಎಂದು ಹೇಳುತ್ತಿದ್ದೀರಾ’’

‘‘ಹಾಗಲ್ಲ...ಬಿಜೆಪಿಯ ಜೊತೆಗೆ ಕಾಂಗ್ರೆಸನ್ನು ಜೋಡಿಸುವ ಎಲ್ಲ ಕೆಲಸ ಮುಗಿದಿದೆ...ಇನ್ನು ಕಾಂಗ್ರೆಸ್ ಕೇರಳದ ಮೂಲಕ ದಕ್ಷಿಣ ಭಾರತವನ್ನು ಜೋಡಿಸುವ ಕೆಲಸ ಮಾಡಲು ಮುಂದಾಗಿದೆ...’’

‘‘ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಇನ್ನೂ ಬಿಜೆಪಿಯ ಜೊತೆಗೆ ಜೋಡಣೆಯಾಗಿಲ್ಲವಲ್ಲ?’’

‘‘ಓ...ಇನ್ನೂ ಆಗಿಲ್ಲವೆ? ಇದು ನಿಜಕ್ಕೂ ಅಚ್ಚರಿಯ ವಿಷಯ. ಇದು ನನಗೆ ಗೊತ್ತೇ ಇರಲಿಲ್ಲ...ಇದರ ಬಗ್ಗೆ ಕಾಂಗ್ರೆಸ್‌ನ ಹಿರಿಯರ ಜೊತೆಗೆ ಮಾತನಾಡಿ ಶೀಘ್ರದಲ್ಲೇ ಅದನ್ನು ಜೋಡಿಸುವ ಕೆಲಸವನ್ನು ಮಾಡುತ್ತೇನೆ....ಉತ್ತರ ಭಾರತಕ್ಕೆ ಹೋಗದೆ ತುಂಬಾ ದಿನವಾಯಿತಲ್ಲ....ರಾಜಸ್ಥಾನ ಮರೆತೇ ಹೋಗಿತ್ತು...’’ ರಾಹುಲರು ಪಶ್ಚಾತ್ತಾಪ ವ್ಯಕ್ತಪಡಿಸಿದರು. ‘‘ನಿಮ್ಮ ಭಾರತವನ್ನು ಜೋಡಿಸುವ ಕೆಲಸ ಕೇರಳದಲ್ಲಿ ಹೇಗೆ ಮುಂದುವರಿದಿದೆ...?’’ ಕಾಸಿ ವಿಷಯಕ್ಕೆ ಬಂದ.

 ‘‘ವಯನಾಡಿನಲ್ಲಿ ನನ್ನನ್ನು ಈಗಾಗಲೇ ಜೋಡಿಸಿ ಕೊಂಡಿದ್ದೇನೆ...ಹಾಗೆಯೇ ಮಮ್ಮಿಯನ್ನು ಕಾಸರಗೋಡಿಗೆ, ಅಕ್ಕನನ್ನು ಉಪ್ಪಳಕ್ಕೆ, ಜೀಜುವನ್ನು ಕಲ್ಲಿಕೋಟೆಗೆ, ಕಾಂಗ್ರೆಸ್‌ನಲ್ಲಿ ಇನ್ನೂ ಉಳಿದುಕೊಂಡಿರುವ ಹಿರಿಯರನ್ನು ವೃದ್ಧಾಶ್ರಮದಿಂದ ಕರೆತಂದು ನೇರವಾಗಿ ಟ್ರಿವೆಂಡ್ರಮ್, ಮಲಪ್ಪುರಂ...ಹೀಗೆ ಬೇರೆ ಬೇರೆ ಜಿಲ್ಲೆಗೆ ಜೋಡಿಸಲಿದ್ದೇವೆ. ಹಾಗೆಯೇ ಉತ್ತರ ಭಾರತದಲ್ಲಿರುವ ಎಲ್ಲ ನಾಯಕರಿಗೂ ಕೇರಳದಲ್ಲಿ ಪುನರ್ವಸತಿ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಕೇರಳದ ಮುಖ್ಯಮಂತ್ರಿಯವರ ಜೊತೆಗೆ ಮಾತುಕತೆ ನಡೆಸಿದ್ದೇನೆ....’’

‘‘ಕೇರಳದಲ್ಲಿ ಕಾಂಗ್ರೆಸ್ ಜೋಡಣೆ ಪೂರ್ತಿಯಾದರೆ ಮತ್ತೆ....’’

‘‘ಮತ್ತೇನು? ಕೇರಳದಲ್ಲಿ ಕಾಂಗ್ರೆಸ್ ಯಶಸ್ವಿಯಾದರೆ ಕೇರಳವನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಜೋಡಿಸುವ ಕೆಲಸವನ್ನು ನಡೆಸಿ ಇಡೀ ದಕ್ಷಿಣ ಭಾರತವನ್ನು ಬಿಜೆಪಿಯೊಂದಿಗೆ ಜೋಡಿಸುವ ಕೆಲಸ ಪೂರ್ತಿ ಮಾಡುತ್ತೇವೆ’’ ಎಂದವರೇ... ಹತ್ತಿರದಲ್ಲೇ ಇರುವ ಪ್ರೈಮರಿ ವಿದ್ಯಾರ್ಥಿಯ ಜೊತೆಗೆ ಐಸ್‌ಕ್ಯಾಂಡಿ ತಿನ್ನುತ್ತಾ ಫೋಟೊ ಹೊಡೆಸಿಕೊಂಡರು.

 ಒಟ್ಟಿನಲ್ಲಿ ಇಡೀ ಭಾರತವನ್ನು ರಾಹುಲರು ಯಾರ ಜೊತೆಗೆ ಜೋಡಿಸಲು ಹೊರಟಿದ್ದಾರೆ ಎನ್ನುವುದು ಅರ್ಥವಾದದ್ದೇ ‘‘ಸರಿ ಸಾರ್’’ ಎನ್ನುತ್ತಾ ಕಾಸಿ ಬೆಂಗಳೂರಿನ ಬಸ್ ಹುಡುಕುತ್ತಾ ವಯನಾಡ್ ಬಸ್‌ಸ್ಟಾಂಡ್ ತಲುಪಿದ.

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News