ಪ್ರಧಾನಿ ಮೋದಿ ಸುಳ್ಳು ಹೇಳುವ ಚಟವುಳ್ಳವರು: ಚೀತಾ ಮರು ಪರಿಚಯಿಸಲು ಪ್ರಯತ್ನ ನಡೆದಿಲ್ಲ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

Update: 2022-09-18 09:08 GMT
Photo:PTI

ಹೊಸದಿಲ್ಲಿ: ಚೀತಾಗಳು  ದೇಶದಲ್ಲಿ ನಾಶವಾಗಿವೆ ಎಂದು ಘೋಷಿಸಿದ ನಂತರ ಅವುಗಳನ್ನು ಭಾರತಕ್ಕೆ ಮರು ಪರಿಚಯಿಸಲು ದಶಕಗಳಿಂದ ಯಾವುದೇ ರಚನಾತ್ಮಕ ಪ್ರಯತ್ನಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ(Prime Minister Narendra Modi) ಹೇಳಿಕೆಗೆ ಕಾಂಗ್ರೆಸ್ ಇಂದು ವಾಗ್ದಾಳಿ ನಡೆಸಿದೆ.

ತನ್ನ ಹಳೆಯ ಪತ್ರವನ್ನು ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕ ಹಾಗೂ  ಪಕ್ಷದ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್,(Jairam Ramesh) ಪ್ರಧಾನಿ "ಸುಳ್ಳು ಹೇಳುವ ಚಟವುಳ್ಳವರು" ಎಂದು ಹೇಳಿದ್ದಾರೆ.

"ಇದು 2009 ರಲ್ಲಿ ಪ್ರಾಜೆಕ್ಟ್ ಚೀತಾವನ್ನು ಆರಂಭಿಸಿದಾಗ ಬರೆದ ಪತ್ರವಾಗಿತ್ತು. ನಮ್ಮ ಪ್ರಧಾನಿ  ಸುಳ್ಳು ಹೇಳುವ ಚಟವುಳ್ಳವರು. #BharatJodoYatra ನಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಕಾರಣ ನಾನು ನಿನ್ನೆ ಈ ಪತ್ರದ ಮೇಲೆ ಕೈಯಾಡಿಸಲು ಸಾಧ್ಯವಾಗಲಿಲ್ಲ" ಎಂದು ರಮೇಶ್  ಟ್ವೀಟ್ ಮಾಡಿದ್ದಾರೆ.

ರಮೇಶ್ ಅವರು ಹಂಚಿಕೊಂಡ ಪತ್ರವು 2009 ರ ಹಿಂದಿನದು. ಪತ್ರದಲ್ಲಿ, ಯುಪಿಎ-II ಸರ್ಕಾರದಲ್ಲಿ ಪರಿಸರ ಹಾಗೂ  ಅರಣ್ಯ ಖಾತೆಗಳನ್ನು ಹೊಂದಿದ್ದ ರಮೇಶ್,  ಚೀತಾಗಳನ್ನು ಮರುಪರಿಚಯಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಭಾರತದ ವನ್ಯಜೀವಿ ಟ್ರಸ್ಟ್‌ನ ಕಾರ್ಯನಿರ್ವಾಹಕರಿಗೆ ಸೂಚಿಸಿದ್ದರು..

ಭಾರತದಲ್ಲಿ ಚೀತಾ ಸಂಖ್ಯೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದ ಯೋಜನೆಯಡಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದ ಕ್ವಾರಂಟೈನ್ ಆವರಣಕ್ಕೆ ನಮೀಬಿಯಾದಿಂದ ಹಾರಿಹೋದ ಎಂಟು ಚೀತಾಗಳನ್ನು ಪ್ರಧಾನಿ ಮೋದಿ ನಿನ್ನೆ ಬಿಡುಗಡೆ ಮಾಡಿದ್ದರು.

2012 ರಲ್ಲಿ ಯುಪಿಎ ಸರಕಾರದ ಚೀತಾಗಳನ್ನು  ಮರುಪರಿಚಯಿಸುವ ಯೋಜನೆಯನ್ನು ಸುಪ್ರೀಂ ಕೋರ್ಟ್‌ನಿಂದ ತಳ್ಳಿಹಾಕಲಾಯಿತು.  ಕೆಲವು ಸಂರಕ್ಷಣಾಕಾರರು ಭಾರತದಲ್ಲಿ ಮರುಪರಿಚಯಿಸಲು ಆಫ್ರಿಕನ್ ಚೀತಾವನ್ನು ಆಮದು ಮಾಡಿಕೊಳ್ಳುವುದು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್‌ನ (IUCN) ಮರುಪರಿಚಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು.

ಐದು ವರ್ಷಗಳ ನಂತರ 2017 ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ನ್ಯಾಯಾಲಯದ ಮುಂದೆ ಅರ್ಜಿಯನ್ನು ಸಲ್ಲಿಸಿತ್ತು. IUCN ಒಂದು ಜಾತಿಯ ಮರುಪರಿಚಯವನ್ನು ಕಾನೂನುಬದ್ಧ ಪ್ರಕ್ರಿಯೆಯಾಗಿ ಸ್ವೀಕರಿಸಿದೆ ಎಂದು ವಾದಿಸಿತು.

ನಂತರ ನ್ಯಾಯಾಲಯವು ಈ ವಿಷಯದಲ್ಲಿ ವಿವರವಾದ ಅಧ್ಯಯನಕ್ಕೆ ಆದೇಶಿಸುವಾಗ ಯೋಜನೆಗೆ ಚಾಲನೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News