ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೋರಿಕೆ ಪ್ರಕರಣಕ್ಕೆ ಮಹತ್ವದ ತಿರುವು

Update: 2022-09-19 05:04 GMT
photo :twetter

ಮೊಹಾಲಿ: ಚಂಡೀಗಢ (Chandigarh) ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಎಂಎಂಎಸ್ ಸೋರಿಕೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅನೇಕ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳು ಸೋರಿಕೆಯಾಗಿವೆ ಎಂದು ಆರೋಪಿಸಿ ವಿವಿಯಲ್ಲಿ ಪ್ರತಿಭಟನೆಗಳು ನಡೆದಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. 

ಆದರೆ, ವಿದ್ಯಾರ್ಥಿನಿಯರ ಖಾಸಗಿ ವಿಡಿಯೊ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವು ಲಭಿಸಿದ್ದು, ಕೇವಲ ಒಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾತ್ರ ಸೋರಿಕೆಯಾಗಿದೆ ಎಂದು ವರದಿಯಾಗಿದೆ. 

ವಿದ್ಯಾರ್ಥಿನಿಯೊಬ್ಬಳು ತನ್ನ ಖಾಸಗಿ ವಿಡಿಯೊಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ್ದಳು, ಸದ್ಯ, ಈ ಒಂದು ವಿಡಿಯೊ ಮಾತ್ರ ಸೋರಿಕೆ ಆಗಿದೆ. ಈಗಾಗಲೇ ಆರೋಪಿಸಲ್ಪಟ್ಟಂತೆ 60 ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಡಿಯೊಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಗರ್ಲ್ಸ್ ಹಾಸ್ಟೆಲ್ ನ ಖಾಸಗಿ ವೀಡಿಯೊ ಆನ್ ಲೈನ್ ನಲ್ಲಿ ಸೋರಿಕೆ: ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ಭಾರೀ  ಪ್ರತಿಭಟನೆ

‘ಘಟನೆಗೆ ಸಂಬಂಧಿಸಿ ಈಗಾಗಲೇ ಬಂಧಿಸಲ್ಪಟ್ಟಿರುವ ವಿದ್ಯಾರ್ಥಿನಿಯ ಒಂದು ವಿಡಿಯೊ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಬೇರೆ ಯಾವುದೇ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಡಿಯೊ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ದೊರಕಿಲ್ಲ. ವಿದ್ಯಾರ್ಥಿನಿಯರು ಆತಂಕ ಪಡುವ ಅವಶ್ಯಕತೆ ಇಲ್ಲʼ  ಎಂದು ಮೋಹಾಲಿ ಎಸ್‌ಪಿ ವಿವೇಕ್ ಸೋನಿ ತಿಳಿಸಿದ್ದಾರೆ.

ಬಂಧಿತ ವಿದ್ಯಾರ್ಥಿನಿ ಸ್ನಾನದ ಸಮಯದಲ್ಲಿ ತನ್ನೊಂದಿಗೆ ವಾಸಿಸುವ ಹುಡುಗಿಯರ 50-60 ವೀಡಿಯೊ ತುಣುಕುಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಶಿಮ್ಲಾದಲ್ಲಿ ವಾಸಿಸುವ ತನ್ನ ಗೆಳೆಯನಿಗೆ ಕಳುಹಿಸಿದ್ದು,  ಆತ ಆ ವಿಡಿಯೋ ಕ್ಲಿಪ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

‘ಬಂಧಿತ ವಿದ್ಯಾರ್ಥಿನಿ ತನ್ನ ಗೆಳೆಯನಿಗೆ ಕಳಿಸಲು ಬಾತ್‌ರೂಮ್‌ನಲ್ಲಿ ತನ್ನ ಖಾಸಗಿ ವಿಡಿಯೊ ಚಿತ್ರೀಕರಿಸುವಾಗ ಅದನ್ನು ಇತರ ಕೆಲ ವಿದ್ಯಾರ್ಥಿನಿಯರು ಗಮನಿಸಿದ್ದಾರೆ. ಆಕೆ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ವಿಡಿಯೋ ವೈರಲ್ ಮಾಡಿರಬಹುದು ಎಂದು ಇತರೆ ವಿದ್ಯಾರ್ಥಿನಿಯರು ಭಾವಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

 ಆರೋಪಿ ವಿದ್ಯಾರ್ಥಿನಿಯ ಗೆಳೆಯನ ಬಂಧನ

ವೀಡಿಯೋ ಸೋರಿಕೆ ಪ್ರಕರಣದಲ್ಲಿ ಈಗಾಗಲೇ ಬಂಧಿತ ವಿದ್ಯಾರ್ಥಿನಿಯ ಗೆಳೆಯ,ಶಿಮ್ಲಾದ ರೋಹ್ರು ನಿವಾಸಿ ಸನ್ನಿ ಮೆಹ್ತಾ (23) ಎಂಬಾತನನ್ನು ಪಂಜಾಬ ಪೊಲೀಸರು ರವಿವಾರ ಬಂಧಿಸಿದ್ದಾರೆ. ಆರೋಪಿ ವಿದ್ಯಾರ್ಥಿನಿಯೂ ರೋಹ್ರು ನಿವಾಸಿಯಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News