ವಿದ್ಯಾರ್ಥಿನಿಯರ ಖಾಸಗಿ ವೀಡಿಯೊ ಸೋರಿಕೆ ಪ್ರಕರಣ: ಚಂಡೀಗಢ ವಿವಿ ಶನಿವಾರದವರೆಗೆ ಬಂದ್

Update: 2022-09-19 05:24 GMT
Photo: NDTV

ಹೊಸದಿಲ್ಲಿ: ವಿದ್ಯಾರ್ಥಿನಿಯರ ಹಾಸ್ಟೆಲ್‌ನಿಂದ ಆಕ್ಷೇಪಾರ್ಹ ವೀಡಿಯೊಗಳು ಸೋರಿಕೆಯಾಗಿರುವ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಬೃಹತ್ ಪ್ರತಿಭಟನೆಯ ನಂತರ  ಚಂಡಿಗಢ ವಿಶ್ವವಿದ್ಯಾಲಯದ(Chandigarh University) ಆಡಳಿತವು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಾಲಕಿಯರ ಹಾಸ್ಟೆಲ್ ವಾರ್ಡನ್ ರಾಜ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿದೆ. ವಿಶ್ವವಿದ್ಯಾನಿಲಯವನ್ನು ವಿದ್ಯಾರ್ಥಿಗಳಿಗೆ ಶನಿವಾರದವರೆಗೆ ಮುಚ್ಚಲಾಗಿದೆ ಎಂದು NDTV ವರದಿ ಮಾಡಿದೆ.

ವಿಶ್ವವಿದ್ಯಾನಿಲಯದ ಹೊರಗಿನ ವ್ಯಕ್ತಿಗೆ ವೀಡಿಯೊಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾದ ಬಂಧಿತ ವಿದ್ಯಾರ್ಥಿನಿಯೊಂದಿಗೆ ವೈರಲ್ ವೀಡಿಯೊದಲ್ಲಿ ಕಂಡುಬಂದ ಹಾಸ್ಟೆಲ್ ವಾರ್ಡನ್ ಈ ವಿಷಯದ ಬಗ್ಗೆ ತಕ್ಷಣವೇ ಪೊಲೀಸರಿಗೆ ತಿಳಿಸಲಿಲ್ಲ ಎಂದು ವರದಿಯಾಗಿದೆ. ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದಾಗ ವಾರ್ಡನ್ ವಿದ್ಯಾರ್ಥಿನಿಯರಿಗೆ ಗದರಿಸಿದ್ದಾಗಿ ವರದಿಯಾಗಿದೆ.

ಪಂಜಾಬ್‌ನ ಮೊಹಾಲಿಯಲ್ಲಿರುವ ಚಂಡಿಗಢ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ತೆಗೆದು ಬಿಡುಗಡೆ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ವಿದ್ಯಾರ್ಥಿನಿಯ ಫೋನ್‌ನಲ್ಲಿ ಕೇವಲ ನಾಲ್ಕು ವೀಡಿಯೊಗಳು ಮಾತ್ರ ಪತ್ತೆಯಾಗಿವೆ ಎಂದು ಪೊಲೀಸರು ರವಿವಾರ ಸಂಜೆ NDTV ಗೆ ತಿಳಿಸಿದ್ದಾರೆ.

ಆದರೆ ಇವೆಲ್ಲವೂ ಈ ಮಹಿಳೆ ತನ್ನ ಪ್ರಿಯಕರನಿಗೆ ಕಳುಹಿಸಿದ್ದು ಎಂದು ಮೊಹಾಲಿಯ ಉನ್ನತ ಪೊಲೀಸ್ ಅಧಿಕಾರಿ ನವರೀತ್ ಸಿಂಗ್ ವಿರ್ಕ್ ಹೇಳಿದ್ದಾರೆ.

ಬಂಧಿತ ವಿದ್ಯಾರ್ಥಿನಿಯು ಹಾಸ್ಟೆಲ್ ಬಾತ್ ರೂಮ್ ನಲ್ಲಿಇತರ ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ತೆಗೆದಿದ್ದಾರೆ ಎಂಬುದಕ್ಕೆ ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎನ್ನುವ ಪೊಲೀಸ್ ಹೇಳಿಕೆಯನ್ನು ಒಪ್ಪಿಕೊಳ್ಳಲು ಚಂಡಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News