ಉತ್ತರ ಪ್ರದೇಶದ ಅಯ್ಯೋಧ್ಯೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್‍ಗೆ ದೇವಸ್ಥಾನ ನಿರ್ಮಿಸಿದ ಭಕ್ತ

Update: 2022-09-19 13:36 GMT
Photo: Twitter/@ANI 

ಲಕ್ನೋ: ಉತ್ತರ ಪ್ರದೇಶದ ಅಯ್ಯೋಧ್ಯೆಯಲ್ಲಿ(Ayodhya) ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್(Uttar Pradesh CM Adityanath) ಅವರ ದೇವಸ್ಥಾನವನ್ನು ನಿರ್ಮಿಸಲಾಗಿದೆ.

ರಾಮ ಮಂದಿರ ನಿರ್ಮಾಣವಾಗುತ್ತಿರುವ ಸ್ಥಳದಿಂದ ಸುಮಾರು 20 ಕಿಮೀ ದೂರದಲ್ಲಿರುವ ಕಲ್ಯಾಣ್ ಭದರ್ಸ ಗ್ರಾಮದ ಮಜ್ರೆ ಮೌರ್ಯ ಕಾ ಪೂರ್ವ ಪ್ರದೇಶದಲ್ಲಿ ಆದಿತ್ಯನಾಥ್ ಅವರ ಮೂರ್ತಿ ಇರುವ ಈ ದೇವಸ್ಥಾನವನ್ನು ಸ್ಥಳೀಯ ನಿವಾಸಿ ಪ್ರಭಾಕರ್ ಮೌರ್ಯ ಎಂಬವರು ನಿರ್ಮಿಸಿದ್ದಾರೆ.

ಆಗಸ್ಟ್ 5, 2020 ರಂದು ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ದಿನವೇ ಈ ದೇವಸ್ಥಾನಕ್ಕೂ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ಆದಿತ್ಯನಾಥ್ ಅವರಂತೆಯೇ ಕೇಸರಿ ವಸ್ತ್ರಧಾರಿಯಾಗಿರುವ  ಪ್ರಭಾಕರ್ ಮೌರ್ಯ ಹೇಳಿದ್ದಾರೆ.

"ಗೋರಖಪುರದ ಖ್ಯಾತ ಗೋರಖನಾಥ ದೇವಸ್ಥಾನದ ಮಹಂತ್ ಕೂಡ ಆಗಿರುವ ಆದಿತ್ಯನಾಥ್ ಅವರಿಗಾಗಿ ನಿರ್ಮಿಸಲಾಗಿರುವ ಈ ದೇವಸ್ಥಾನದಲ್ಲಿ ದಿನಂಪ್ರತಿ ಪೂಜೆ ನೆರವೇರಿಸಲಾಗುತ್ತದೆ ಹಾಗೂ ಪ್ರತಿದಿನ ಎರಡು  ಬಾರಿ ಆರತಿ ಕೂಡ ನಡೆಸಲಾಗುತ್ತದೆ,'' ಎಂದು ಆದಿತ್ಯನಾಥ್ ಅವರನ್ನು ಹೊಗಳಿ ಹಲವು ಪದ್ಯಗಳನ್ನೂ ಬರೆದಿರುವ ಮೌರ್ಯ ಹೇಳಿದ್ದಾರೆ.

ತಾನು ಶ್ರೀ ರಾಮನ ಭಕ್ತ ಹಾಗೂ ಅಯ್ಯೋಧ್ಯೆಯಲ್ಲಿ ಶ್ರೀ ರಾಮನ ದೇವಸ್ಥಾನ ನಿರ್ಮಿಸಲು ಸಹಾಯ ಮಾಡುವವರನ್ನು ತಾನು ಆರಾಧಿಸುವುದಾಗಿ ಪಣ ತೊಟ್ಟಿದ್ದಾಗಿ ಹಾಗೂ ರಾಮ ಮಂದಿರ ನಿರ್ಮಾಣ ಆದಿತ್ಯನಾಥ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಆರಂಭಗೊಂಡಿದ್ದರಿಂದ ಅವರಿಗಾಗಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಮೌರ್ಯ ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ದೇವಸ್ಥಾನದ ಕುರಿತು ಪ್ರತಿಕ್ರಿಯಿಸಿದ ಅಯ್ಯೋಧ್ಯೆಯ ಕೆಲ ಸಂತರು, ಈ ದೇವಳ ನಿರ್ಮಿಸಿದವರ ಭಾವನೆಗಳನ್ನು ಗೌರವಿಸಬೇಕು ಎಂದಿದ್ದಾರೆ. ಇನ್ನು ಕೆಲವರು ಪ್ರಧಾನಿ ಮೋದಿ ಹಾಗೂ ಆದಿತ್ಯನಾಥ್ ಅವರ ದೇವಸ್ಥಾನಗಳನ್ನು ಎಲ್ಲಾ ಕಡೆಗಳಲ್ಲಿ ನಿರ್ಮಿಸಿ ಜನರು ಅವರನ್ನು ಆರಾಧಿಸುವಂತೆ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಕ್ರಿಶ್ಚಿಯನ್, ಇಸ್ಲಾಮ್‌ಗೆ ಮತಾಂತರಗೊಂಡ ಎಸ್‌ಸಿಗಳ ಸ್ಥಿತಿಗತಿ ಅಧ್ಯಯನಕ್ಕೆ ಆಯೋಗ ರಚನೆಗೆ ಕೇಂದ್ರ ಸಜ್ಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News