×
Ad

ಇಂಗ್ಲಿಷ್, ಹಿಂದಿ ತಿಳಿದಿಲ್ಲ ಎಂದು ಪ್ರಯಾಣಿಕೆಯನ್ನು ಎಮರ್ಜೆನ್ಸಿ ಎಕ್ಸಿಟ್ ಸೀಟಿನಲ್ಲಿ ಕೂರಿಸಿದ ವಿಮಾನ ಸಿಬ್ಬಂದಿ

Update: 2022-09-19 18:09 IST

ಹೊಸದಿಲ್ಲಿ: ಹಿಂದಿ ಅಥವಾ ಇಂಗ್ಲಿಷ್ (Hindi, English) ಭಾಷೆ ಗೊತ್ತಿಲ್ಲ, ತೆಲುಗು(Telugu) ಮಾತ್ರ ಗೊತ್ತಿದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಇಂಡಿಗೋ ವಿಮಾನದ ಸಿಬ್ಬಂದಿ ಆಕೆಯ ಮೂಲ ಸೀಟಿನ ಬದಲು ಎಮರ್ಜನ್ಸಿ ಎಕ್ಸಿಟ್(Emergency Exit Seat) ಪಕ್ಕದ ಸಾಲಿನಲ್ಲಿ ಕೂರಿಸಿದ್ದಾರೆನ್ನಲಾದ ಘಟನೆ ಸಾಕಷ್ಟು ವಿವಾದಕ್ಕೀಡಾಗಿದೆ ಎಂದು thequint ವರದಿ ಮಾಡಿದೆ.

ಈ ಘಟನೆ ಸೆಪ್ಟೆಂಬರ್ 17, ಶುಕ್ರವಾರ ನಡೆದಿದೆಯೆನ್ನಲಾಗಿದ್ದು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐಐಎಂ-ಅಹ್ಮದಾಬಾದ್ ಇಲ್ಲಿನ ಸಹಾಯಕ ಪ್ರೊಫೆಸರ್ ಆಗಿರುವ ದೇವಸ್ಮಿತ ಚಕ್ರವರ್ತಿ ಅವರು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಅದು ಬೆಳಕಿಗೆ ಬಂದಿದೆ.

ಈ ನಿರ್ದಿಷ್ಟ ಪ್ರಯಾಣಿಕೆಯ ಫೋಟೋ ಕೂಡ ಪೋಸ್ಟ್ ಮಾಡಿರುವ ದೇವಸ್ಮಿತ, "ಮಹಿಳೆಯೊಬ್ಬರಿಗೆ ತೆಲುಗು ಭಾಷೆ ಮಾತ್ರ ಗೊತ್ತಿರುವುದು ಹಾಗೂ ಆಕೆಗೆ ಇಂಗ್ಲಿಷ್ ಅಥವಾ ಹಿಂದಿ ತಿಳಿದಿಲ್ಲವೆಂದು ಆಕೆಯನ್ನು ಬಲವಂತವಾಗಿ 3ಸಿ ಸೀಟಿನಲ್ಲಿ ಕೂರಿಸಲಾಯಿತು. ಇದು ಭದ್ರತೆ ವಿಚಾರ ಎಂದು ವಿಮಾನದ ಪರಿಚಾರಿಕೆ ಹೇಳಿದರು,'' ಎಂದು ದೇವಸ್ಮಿತ ಪೋಸ್ಟ್ ಮಾಡಿದ್ದಾರೆ.

ಈ ವಿಚಾರವು ವಿಮಾನಗಳಲ್ಲಿ ಭಾಷಾ ಆಧರಿತ ತಾರತಮ್ಯ ಹಾಗೂ ವಿಮಾನ ಸಿಬ್ಬಂದಿ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಓದುವ ಅಗತ್ಯದ ಕುರಿತು ಚರ್ಚೆಗೆ ಗ್ರಾಸವೊದಗಿಸಿದೆ.

ಕೆಲ ಸಾಮಾಜಿಕ ಜಾಲತಾಣಿಗರು ವಿಮಾನ ಸಿಬ್ಬಂದಿಯನ್ನು ಟೀಕಿಸಿದರೆ ಇನ್ನು ಕೆಲವರು ಎಮರ್ಜನ್ಸಿ ಎಕ್ಸಿಟ್ ಸಾಲಿನಲ್ಲಿ ಕುಳಿತಿರುವವರಿಗೆ ತುರ್ತು ಪರಿಸ್ಥಿತಿ ಸಂದರ್ಭ ಹೆಚ್ಚಿನ ಜವಾಬ್ದಾರಿಗಳಿರುತ್ತವೆ ಎಂದಿದ್ದಾರೆ. ಇಂತಹ ವಿಚಾರಗಳನ್ನು ವಿಮಾನ ಸಿಬ್ಬಂದಿ ನಿರ್ಧರಿಸಬಹುದು ಎಂದೂ ಕೆಲ ಸಾಮಾಜಿಕ ಜಾಲತಾಣಿಗರು ಹೇಳಿದ್ದಾರೆ.

ವಿಮಾನಗಳಲ್ಲಿ ಎಕ್ಸಿಟ್ ಸಾಲುಗಳು ಎಮರ್ಜೆನ್ಸಿ ಎಕ್ಸಿಟ್ ಸಮೀಪವಿದೆ. ಇಲ್ಲಿ ಹೆಚ್ಚು ಸ್ಥಳವಿರುವುದರಿಂದ ಈ ಸೀಟುಗಳಿಗೆ ಹೆಚ್ಚಿನ ಬೇಡಿಕೆಯಿದ್ದು ವಿಮಾನಯಾನ ಸಂಸ್ಥೆಗಳು ಈ ಸೀಟುಗಳಿಗೆ ಹೆಚುವರಿ ಶುಲ್ಕ ವಿಧಿಸುತ್ತವೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಐಟಿ ಸಚಿವ ಕೆ ಟಿ ರಾಮ ರಾವ್, ವಿಮಾನಗಳಲ್ಲಿ ಸ್ಥಳೀಯ ಭಾಷೆ ತಿಳಿದಿರುವ ಸಿಬ್ಬಂದಿಗಳನ್ನು ನೇಮಕಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಶ್ಚಿಯನ್, ಇಸ್ಲಾಮ್‌ಗೆ ಮತಾಂತರಗೊಂಡ ಎಸ್‌ಸಿಗಳ ಸ್ಥಿತಿಗತಿ ಅಧ್ಯಯನಕ್ಕೆ ಆಯೋಗ ರಚನೆಗೆ ಕೇಂದ್ರ ಸಜ್ಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News