×
Ad

ಎಲ್ಗಾರ್ ಪರಿಷದ್ ಪ್ರಕರಣ: ದಿಲ್ಲಿ ವಿವಿ ಸಹ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್

Update: 2022-09-19 21:39 IST
photo :pti 

ಮುಂಬೈ,ಸೆ.19: ಎಲ್ಗಾರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಆರೋಪಿಯಾಗಿರುವ ದಿಲ್ಲಿ ವಿವಿಯ ಸಹ ಪ್ರಾಧ್ಯಾಪಕ ಹನಿ ಬಾಬು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.

ವಿಶೇಷ ನ್ಯಾಯಾಲಯದ ವಿರುದ್ಧ ಬಾಬು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎನ್.ಎಂ ಜಾಮದಾರ್ ಮತ್ತು ಎನ್.ಆರ್.ಬೋರ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ತಿಳಿಸಿತು. ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಯಕರ ಸೂಚನೆಗಳಂತೆ ಮಾವೋವಾದಿ ಚಟುವಟಿಕೆಗಳನ್ನು ಮತ್ತು ಸಿದ್ಧಾಂತವನ್ನು ಪ್ರಸಾರಿಸುವುದರಲ್ಲಿ ಬಾಬು ಸಹ ಸಂಚುಕೋರರಾಗಿದ್ದರು ಎಂದು ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಎನ್‌ಐಎ ಆರೋಪಿಸಿದೆ.

ಬಾಬು ಅವರನ್ನು ಜುಲೈ 2020ರಲ್ಲಿ ಬಂಧಿಸಲಾಗಿದ್ದು,ಪ್ರಸ್ತುತ ನವಿ ಮುಂಬೈನ ತಲೋಜಾ ಜೈಲಿನಲ್ಲಿದ್ದಾರೆ.

ಪ್ರಕರಣವು 2017,ಡಿ.31ರಂದು ಪುಣೆಯ ಶನಿವಾರವಾಡಾದಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಮಾಡಲಾಗಿದ್ದ, ಪ್ರಚೋದನಾಕಾರಿ ಎಂದು ಆರೋಪಿಸಲಾದ ಭಾಷಣಗಳಿಗೆ ಸಂಬಂಧಿಸಿದೆ. ಈ ಭಾಷಣಗಳು ಮರುದಿನ ನಗರದ ಹೊರವಲಯದಲ್ಲಿನ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಭುಗಿಲೇಳಲು ಕಾರಣವಾಗಿದ್ದವು ಎಂದು ಪೊಲೀಸರು ಹೇಳಿದ್ದರು. ಹಿಂಸಾಚಾರದ ಸಂದರ್ಭದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ಇತರ ಹಲವಾರು ಜನರು ಗಾಯಗೊಂಡಿದ್ದರು.

ಈ ವರ್ಷದ ಆರಂಭದಲ್ಲಿ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ವಿಶೇಷ ಎನ್‌ಐಎ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಾಬು ಜೂನ್‌ನಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News