ನಾಗಾಲ್ಯಾಂಡ್‌ನಲ್ಲಿ ಬಿಜೆಪಿಯಿಂದ ಪಕ್ಷದ ಕೆಲಸಗಳಿಗೆ ಸರಕಾರಿ ಯಂತ್ರದ ಬಳಕೆ:ವಿಪಕ್ಷ ಆರೋಪ

Update: 2022-09-19 16:13 GMT

ಗುವಾಹಟಿ,ಸೆ.19: ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ನಾಗಾಲ್ಯಾಂಡ್‌ನಲ್ಲಿ ಬಿಜೆಪಿಯು ಪಕ್ಷದ ಕೆಲಸಗಳಿಗಾಗಿ ಸರಕಾರಿ ಯಂತ್ರವನ್ನು ಬಳಸಿಕೊಳ್ಳುತ್ತಿದೆ ಎಂದು ವಿಪಕ್ಷ ರೈಸಿಂಗ್ ಪೀಪಲ್ಸ್ ಪಾರ್ಟಿ (ಆರ್‌ಪಿಪಿ) ಆರೋಪಿಸಿದೆ.

ರಾಜ್ಯದಲ್ಲಿಯ ಎಲ್ಲ ಮುಖ್ಯ ವೈದ್ಯಾಧಿಕಾರಿಗಳು/ವೈದ್ಯಕೀಯ ಅಧೀಕ್ಷಕರಿಗೆ ಸೆ.17ರಂದು ಪತ್ರವನ್ನು ಬರೆದಿರುವ ಆರೋಗ್ಯ ಇಲಾಖೆಯು, ನಾಗಾಲ್ಯಾಂಡ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ನಿರ್ದೇಶನದಂತೆ 2022,ಸೆ.19ರಿಂದ ಅ.1ರವರೆಗೆ ವೈದ್ಯಕೀಯ ಶಿಬಿರಗಳನ್ನು ನಡೆಸಲು ಬಿಜೆಪಿಯ ಸೇವಾ ಪಖ್ವಾಡಾ ತಂಡಗಳಿಗೆ ವೈದ್ಯಕೀಯ ನೆರವು ಒದಗಿಸುವಂತೆ ಸೂಚಿಸಿದೆ.

ಈ ಪತ್ರವು ಆರ್‌ಪಿಪಿಯ ಗಮನವನ್ನು ಸೆಳೆದಿದೆ. ‘ಪ್ರತಿಯೊಂದಕ್ಕೂ ಮಿತಿ ಇರುತ್ತದೆ ’ ಎಂದು ಕಿಡಿ ಕಾರಿರುವ ಅದು,ಮೂರು ದಿನಗಳಲ್ಲಿ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಇಲ್ಲವೇ ಪ್ರತಿಭಟನೆಯನ್ನು ಎದುರಿಸುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಬಿಜೆಪಿಯು ವೈದ್ಯರನ್ನು ನೇಮಿಸಿಕೊಂಡು ತನ್ನ ಸಂತ ಸಂಪನ್ಮೂಲಗಳನ್ನು ಬಳಸುವ ಮೂಲಕ ಅಥವಾ ಲಯನ್ಸ್ ಕ್ಲಬ್ ಅಥವಾ ರೋಟರಿ ಕ್ಲಬ್‌ನಂತಹ ದತ್ತಿ ಸಂಸ್ಥೆಗಳ ನೆರವಿನೊಂದಿಗೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲು ಸ್ವತಂತ್ರವಿದೆ ಎಂದು ವಿಪಕ್ಷವು ಹೇಳಿದೆ.

ರಾಜ್ಯದ ಆಡಳಿತ ಮೈತ್ರಿಕೂಟದಲ್ಲಿ ಬಿಜೆಪಿ ಪ್ರಮುಖ ಪಾಲುದಾರನಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News