ಚಂಡಿಗಡ ವಿವಿ ಪ್ರಕರಣ ಕುರಿತು ವಿಶೇಷ ತನಿಖಾ ತಂಡ ರಚನೆ
ಚಂಡಿಗಡ,ಸೆ.19: ಚಂಡಿಗಡ ವಿವಿಯ ಮಹಿಳಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೋರ್ವಳು ಹಲವಾರು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊಗಳನ್ನು ಚಿತ್ರೀಕರಿಸಿದ್ದಾಳೆ ಎಂಬ ಆರೋಪಗಳ ಕುರಿತು ತನಿಖೆಗಾಗಿ ಮೂವರು ಸದಸ್ಯರ,ಸರ್ವ ಮಹಿಳಾ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಿರುವುದಾಗಿ ಪಂಜಾಬ್ ಪೊಲೀಸ್ ಇಲಾಖೆಯು ಸೋಮವಾರ ತಿಳಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಗುರ್ಪ್ರೀತ್ ಕೌರ್ ಅವರ ಮೇಲ್ವಿಚಾರಣೆಯಡಿ ಸಿಟ್ ಅನ್ನು ರಚಿಸಲಾಗಿದ್ದು,ಅದು ಪ್ರಕರಣದ ಕುರಿತು ಸಮಗ್ರ ತನಿಖೆಯನ್ನು ನಡೆಸಲಿದೆ ಮತ್ತು ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಡಿಜಿಪಿ ಗೌರವ ಯಾದವ ತಿಳಿಸಿದರು.
ತನಿಖೆಯು ಭರದಿಂದ ನಡೆಯುತ್ತಿದ್ದು,ಆರೋಪಿ ವಿದ್ಯಾರ್ಥಿನಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ ಅವರು,ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಳ್ಳುವಂತೆ ಪ್ರತಿಯೊಬ್ಬರನ್ನೂ ಕೋರಿಕೊಂಡರು.
ಶನಿವಾರ ರಾತ್ರಿಯಿಂದ ವಿದ್ಯಾರ್ಥಿಗಳ ಪ್ರತಿಭಟನೆಗೆ ಪಂಜಾಬಿನ ಮೊಹಾಲಿ ಸಾಕ್ಷಿಯಾಗಿದ್ದು,ಸೋಮವಾರ ಬೆಳಗಿನ ಜಾವದವರೆಗೂ ಪ್ರತಿಭಟನೆಗಳು ಮುಂದುವರಿದಿದ್ದವು.