ಕ್ರೀಡಾ ಸಂಘದ ಮುಖ್ಯಸ್ಥರಿಗೆ ವ್ಹೀಲ್ ಚೇರ್‌ನಲ್ಲಿ ವಿಮಾನ ಏರಲು ಅವಕಾಶ ನಿರಾಕರಣೆ: ಆರೋಪ

Update: 2022-09-20 02:54 GMT

ಮುಂಬೈ: ಬಾಲಿಯಲ್ಲಿ ಸೆ. 20 ರಿಂದ 24ರರವರೆಗೆ ನಡೆಯುವ ವಿಶ್ವ ಪಿಕಲ್‍ ಬಾಲ್ ಚಾಂಪಿಯನ್‍ಶಿಪ್‍ (World Pickleball Championship) ನಲ್ಲಿ ಭಾರತವನ್ನು ಪ್ರತಿನಿಧಿಸುವ 16 ಮಂದಿ ಆಟಗಾರರ ತಂಡ ಜತೆಗೆ ತೆರಳಬೇಕಿದ್ದ ಅಖಿಲ ಭಾರತ ಪಿಕಲ್‍ಬಾಲ್ ಅಸೋಸಿಯೇಶನ್‍ನ ಅಧ್ಯಕ್ಷ ಅರವಿಂದ ಪ್ರಭು ಅವರನ್ನು ವ್ಹೀಲ್‍ಚೇರ್‌ ನಲ್ಲಿ ವಿಯೆಟ್‍ಜೆಟ್ ವಿಮಾನ ಏರಲು ಅವಕಾಶ ನೀಡದೇ ತಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ವ್ಹೀಲ್‍ಚೇರ್‌ ನಲ್ಲಿ ಆಗಮಿಸಿದ ಪ್ರಯಾಣಿಕರಿಗೆ ವಿಮಾನ ಏರಲು ಬೋರ್ಡಿಂಗ್ ಪಾಸ್ ನೀಡುವ ಸಂಬಂಧ ಏರ್‍ಲೈನ್ಸ್ ಯಾವುದೇ ನೀತಿಯನ್ನು ಹೊಂದಿಲ್ಲ ಎಂಬ ಕಾರಣ ನೀಡಿ ಇದೇ ಮೊದಲ ಬಾರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು 35 ವರ್ಷದ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ವ್ಹೀಲ್‍ಚೇರ್ ಆಧರಿಸಿರುವ ಪ್ರಭು ದೂರಿದ್ದಾರೆ.

"ಮತ್ತೊಂದು ವಿಮಾನದಿಂದ ಐಸಲ್‍ ಚೇರ್ (aisle chair) ಪಾವತಿ ಮಾಡಲು ಸಿದ್ಧ ಅಥವಾ ನಾಲ್ಕು ಮಂದಿ ಸಹಾಯಕರು ನನ್ನನ್ನು ಆಸನಕ್ಕೆ ಎತ್ತಿಕೊಂಡು ಹೋಗಲು ಸಿದ್ಧರಿದ್ದಾರೆ ಎಂಬ ಮನವಿಗೂ ಕಿವಿಗೊಡದೇ, ವಿಮಾನಯಾನಕ್ಕೆ ಅವಕಾಶ ನೀಡಲಿಲ್ಲ" ಎಂದು ಅವರು ಆಪಾದಿಸಿದ್ದಾರೆ.

ಮುಂಬೈ ಸುಬುರ್ಬನ್ ಟೇಬಲ್ ಟೆನಿಸ್ ಅಸೋಸಿಯೇಶನ್ ಅಧ್ಯಕ್ಷರೂ ಆಗಿರುವ ಅವರು, "ವಿಮಾನ ಟಿಕೆಟ್ ಕಾಯ್ದಿರಿಸುವ ವೇಳೆಯೇ ಅಂಗವಿಕಲ ಪ್ರಯಾಣಿಕ ಎಂದು ಹೆಸರು ನೋಂದಾಯಿಸಿಕೊಂಡು ವ್ಹೀಲ್‍ಚೇರ್‍ಗೆ ಮನವಿ ಸಲ್ಲಿಸಿದ್ದೆ. ಈ ಸೌಲಭ್ಯ ಇಲ್ಲದಿದ್ದರೆ ಆ ಅವಕಾಶವನ್ನು ಇದೆ ಎಂದು ಏಕೆ ಹೇಳಬೇಕು? ವಿಮಾನ ಕಾಯ್ದಿರಿಸುವ ವೇಳೆ ಏಕೆ ಹೇಳಿಲ್ಲ" ಎನ್ನುವುದು ಪ್ರಭು ಅವರ ಪ್ರಶ್ನೆ. ಈ ಸಂಬಂಧ ನಾಗರಿಕ ವಿಮಾನ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News