ಮ್ಯಾನ್ಮಾರ್: 300 ಮಂದಿ ಭಾರತೀಯರಿಗೆ ಸೈಬರ್ ಅಪರಾಧ ಎಸಗಲು ಬಲವಂತ

Update: 2022-09-20 02:22 GMT
ಸಾಂದರ್ಭಿಕ ಚಿತ್ರ

ಚೆನ್ನೈ: ಮ್ಯಾನ್ಮಾರ್‍ನ ಮ್ಯಾವಡ್ಡಿ ಎಂಬಲ್ಲಿ ತಮಿಳುನಾಡಿನ 60 ಮಂದಿ ಸೇರಿದಂತೆ ಕನಿಷ್ಠ 300 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಗ್ಯಾಂಗ್ ಒಂದು, ಅವರಿಂದ ಸೈಬರ್ ಅಪರಾಧ ಕೃತ್ಯಗಳನ್ನು ಬಲವಂತವಾಗಿ ಮಾಡಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ದಂಧೆಯಲ್ಲಿ ಇತರ ದೇಶಗಳ ಕೆಲ ಮಂದಿಯನ್ನು ಕೂಡಾ ಸಿಲುಕಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರದೇಶ ಮ್ಯಾನ್ಮಾರ್ ಸರ್ಕಾರದ ನಿಯಂತ್ರಣದಲ್ಲಿ ಇಲ್ ಹಾಗೂ ಬುಡಕಟ್ಟು ಸಶಸ್ತ್ರ ಗುಂಪುಗಳ ಪ್ರಾಬಲ್ಯವನ್ನು ಹೊಂದಿದೆ. ತಮ್ಮನ್ನು 'ಮಲೇಷ್ಯಾ ಮೂಲದ ಚೀನಿಯರು' ಹಿಡಿದಿಟ್ಟುಕೊಂಡಿದ್ದಾರೆ ಎಂದು ಕೆಲ ಮಂದಿ ತಮ್ಮ ಕುಟುಂಬಗಳಿಗೆ ಸಂದೇಶ ರವಾನಿಸಿದ್ದಾರೆ.

ಕೆಲ ಮಂದಿ ತಮಿಳರು ಎಸ್‍ಓಎಸ್ ವೀಡಿಯೊವನ್ನು ಕಳುಹಿಸಿದ್ದರಿಂದ ಈ ದಂಧೆ ಬೆಳಕಿಗೆ ಬಂದಿದೆ. ಒತ್ತೆಯಾಳುಗಳನ್ನು ರಕ್ಷಿಸುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ದಿನಕ್ಕೆ 15 ಗಂಟೆಗಿಂತಲೂ ಹೆಚ್ಚು ಕಾಲ ಇವರಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಕಾನೂನುಬಾಹಿರ ಕೃತ್ಯಗಳನ್ನು ಎಸಗಲು ನಿರಾಕರಿಸಿದಾಗ, ಥಳಿಸುವ ಮತ್ತು ವಿದ್ಯತ್ ಶಾಕ್ ನೀಡುವಂಥ ಶಿಕ್ಷೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಯಂಗಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಉದ್ಯೋಗದ ಆಮಿಷವೊಡ್ಡುವ ವಂಚಕರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದೆ.

ಸೋಮವಾರ ಕರೈಕಲ್ಮೇಡು ಎಂಬಲ್ಲಿನ ಮೀನುಗಾರ ರಾಜಾ ಸುಬ್ರಹ್ಮಣ್ಯನ್ (60) ಎಂಬವರು ಪುದುಚೇರಿ ಆಡಳಿತಕ್ಕೆ ಮನವಿ ಮಾಡಿ ಮ್ಯಾನ್ಮಾರ್‍ನಲ್ಲಿ ಒತ್ತೆಯಾಳಾಗಿ ಇರುವ ಮಗನನ್ನು ರಕ್ಷಿಸುವಂತೆ ಕೋರಿದ್ದಾರೆ. ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ತಮ್ಮನ ದಯನೀಯ ಸ್ಥಿತಿಯನ್ನು ಸುಬ್ರಹ್ಮಣ್ಯನ್ ಅವರ ಹಿರಿಯ ಮಗ ಸುಧಾಕರ್ ಬಿಚ್ಚಿಟ್ಟಿದ್ದಾರೆ.

"ಈ ವರ್ಷದ ಆರಂಭದಲ್ಲಿ ಕಂಪನಿಯ ವ್ಯವಸ್ಥಾಪಕರು ತಮ್ಮನಿಗೆ ಬಡ್ತಿ ನೀಡುವುದಾಗಿ ಹೇಳಿ ಥಾಯ್ಲೆಂಡ್‍ಗೆ ಕಳುಹಿಸಿದ್ದರು. ಅಲ್ಲಿಂದ ಆತನನ್ನು ಹಾಗೂ ಇತರ ಹಲವು ಮಂದಿಯನ್ನು ಮ್ಯಾನ್ಮಾರ್‍ಗೆ ರಸ್ತೆ ಮೂಲಕ ಅಕ್ರಮವಾಗಿ ಕರೆ ತರಲಾಗಿದೆ" ಎಂದು ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News