ಹದಿಹರೆಯದ ಜೋಡಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Update: 2022-09-20 21:21 IST
ಸಂತ ಕಬೀರ್ ನಗರ,ಸೆ.20: ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ರಾಮಪುರ ಗ್ರಾಮದಲ್ಲಿ ಪರಸ್ಪರ ಪ್ರೇಮಿಸುತ್ತಿದ್ದರೆನ್ನಲಾದ ಹದಿಹರೆಯದ ಬಾಲಕ ಮತ್ತು ಬಾಲಕಿಯ ಮೃತದೇಹಗಳು ಮರವೊಂದರಲ್ಲಿ ನೇಣಿನಲ್ಲಿ ತೂಗಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಗೋರಖ್‌ಪುರ ಜಿಲ್ಲೆಯ ಅಂಷು ಗೊಂಡ್ (18) ಮತ್ತು ಆಂಚಲ್ (15) ಅವರ ಮೃತದೇಹಗಳು ಸೋಮವಾರ ಸಂಜೆ ರಾಮಪುರ ಗ್ರಾಮದ ಮರವೊಂದರಲ್ಲಿ ನೇಣಿನಲ್ಲಿ ತೂಗಾಡುತ್ತಿದ್ದ ಸ್ಥಿತಿಯಲ್ಲಿ ಕಂಡು ಬಂದಿವೆ ಎಂದು ಡಿಎಸ್‌ಪಿ ಅಂಶುಮನ್ ಮಿಶ್ರಾ ತಿಳಿಸಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶವಗಳನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಘಟನಾ ಸ್ಥಳದಲ್ಲಿ ಮೃತರ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಯುವಜೋಡಿಯನ್ನು ಕೊಲೆ ಮಾಡಲಾಗಿದೆ ಎಂದು ಮೃತರ ಕುಟುಂಬಗಳು ಆರೋಪಿಸಿವೆ. ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ಸೋನಮ್ ಕುಮಾರ್ ತಿಳಿಸಿದ್ದಾರೆ.